ತೊಕ್ಕೊಟ್ಟು, ಜೂ.17: ದ್ವಿಚಕ್ರ ವಾಹನದಲ್ಲಿ ನಾಲ್ವರು ಬಾಲಕಿಯರು ಪ್ರಯಾಣಿಸುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತೊಕ್ಕೊಟ್ಟಿನ ಎಬಿಸಿ ಕ್ಲಬ್ ಸಮೀಪ ನಡೆದಿದೆ.
ವಾಹನವು ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಮಗುಚಿಬಿದ್ದಿದ್ದು, ಅಪಘಾತಕ್ಕೂ ಮುನ್ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆಯುವ ಅಪಾಯ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದ್ವಿಚಕ್ರ ವಾಹನಗಳಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಸುವ ಅಪಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.
ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.