ಮಂಗಳೂರು, ಜು. 2: ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆವರಣದಲ್ಲಿ ಸ್ಥಳೀಯರ ಬಹುಕಾಲದ ಒಳಚರಂಡಿ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸುಮಾರು 75 ವರ್ಷಗಳಿಂದ ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆ ಪ್ರಮುಖ ಸಮಸ್ಯೆಯಾಗಿದ್ದು, ಹಿಂದಿನ ಅವಧಿಯಲ್ಲೇ ಕುಡ್ಸೆಂಪ್ ಮೂಲಕ ಅನುದಾನ ಮೀಸಲಿಡಲಾಗಿತ್ತು. ಆದರೆ ನೆಲದಡಿಯ ಬಂಡೆಕಲ್ಲುಗಳಂತಹ ಭೌಗೋಳಿಕ ಸಮಸ್ಯೆಯಿಂದ ಯೋಜನೆ ಜಾರಿಯಾಗಿಲ್ಲ ಎಂದು ತಿಳಿಸಿದರು.



ಪ್ರಸ್ತುತ ಕಾಮಗಾರಿ ಪೂರ್ಣಗೊಳಿಸಲು ಸುಮಾರು ₹2.5ರಿಂದ ₹3 ಕೋಟಿ ಅನುದಾನ ಅಗತ್ಯವಿದ್ದು, ಯಾವುದೇ ಕಾರಣಕ್ಕೂ ಸಮಸ್ಯೆ ಪರಿಹರಿಸಲು ತಮ್ಮ ಪ್ರಯತ್ನ ಮುಂದುವರಿಸುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ಪಾಲಿಕೆ ಅಧಿಕಾರಿಗಳು, ಕುಡ್ಸೆಂಪ್ ಅಧಿಕಾರಿಗಳು, ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.


