ಕುದ್ಮುಲ್ ರಂಗರಾವ್ ಜಯಂತಿ: 500 ವಿದ್ಯಾರ್ಥಿಗಳಿಗೆ ಉಚಿತ ಕಾಲೇಜು ಬ್ಯಾಗ್ ವಿತರಿಸಿದ ಜಿಲ್ಲಾ ಕಾಂಗ್ರೆಸ್


ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ; ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ಮಂಗಳೂರು, ಜುಲೈ 6: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ವತಿಯಿಂದ ಮಹಾನ್ ಸಮಾಜ ಸುಧಾರಕ, ಶಿಕ್ಷಣದ ಹರಿಕಾರ ಹಾಗೂ ದಲಿತೋದ್ಧಾರದ ಮುಂಚೂಣಿ ನಾಯಕ ಪೂಜನೀಯ ಕುದ್ಮುಲ್ ರಂಗರಾವ್ ಅವರ ಜಯಂತಿಯನ್ನು ಭಾನುವಾರ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 500 ವಿದ್ಯಾರ್ಥಿಗಳಿಗೆ ಉಚಿತ ಕಾಲೇಜು ಬ್ಯಾಗ್‌ಗಳನ್ನು ವಿತರಿಸಲಾಯಿತು. ಅಲ್ಲದೆ, ಅತ್ಯಧಿಕ ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರಿಗೆ ಅಭಿನಂದನಾ ಸಮಾರಂಭವೂ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್, “ತಳಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಮೂಲಕ ಹೊಸ ದಾರಿಯನ್ನು ತೋರಿದ ಮಹಾನ್ ವ್ಯಕ್ತಿತ್ವ ಕುದ್ಮುಲ್ ರಂಗರಾವ್. ಅವರ ತತ್ವ, ಆದರ್ಶಗಳನ್ನು ಕಾಂಗ್ರೆಸ್ ಪಕ್ಷ ಸದಾ ಅನುಸರಿಸಿಕೊಂಡು ಸಾಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವುದು ಸಮಾಜದ ಭವಿಷ್ಯ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿದೆ” ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, “ಈ ಕಾರ್ಯಕ್ರಮ ಕೇವಲ ಜಯಂತಿ ಆಚರಣೆಯಾಗಿರದೆ, ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಹಾಗೂ ಸಮಾಜದ ಸಬಲೀಕರಣದ ಸಂದೇಶವನ್ನು ಸಾರುವ ಜನಪರ ಅಭಿಯಾನವಾಗಿದೆ. ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಕೂಡ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿ. ಕೃಷ್ಣಪ್ಪ, ಎನ್. ಬಸವರಾಜ್, ಡಾ. ನಾಯಕ್ ರೂಪ್ ಸಿಂಗ್, ಕಾಣಿರಾಂ ರಾಠೋಡ್, ರಂಗನಾಥ ಪ್ರಸಾದ್, ಸಂತೋಷ್, ಸಾರಿಕಾ ಪೂಜಾರಿ, ಮಾಜಿ ಕಾರ್ಪೊರೇಟರ್ ನಾಗವೇಣಿ, ವಿಜಯಲಕ್ಷ್ಮಿ, ಸುಭಾಸ್ ಕೊಲ್ನಾಡ್, ಸೋಹನ್ ಆಳ್ವ, ಪ್ರೇಮ್ ಬಲ್ಲಾಳ್ ಸೇರಿದಂತೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ, ಗೌತಮ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!