ಸತ್ಯನಾರಾಯಣ ಹೂಡೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ; ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಗಸ್ಟ್ 30ಕ್ಕೆ
ಮಂಗಳೂರು, ಜುಲೈ 6: ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ (ರಿ)ಯ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಹಾಗೂ ಕಾರ್ಯಕಾರಿಣಿ ಸಭೆ ಜಪ್ಪುವಿನ ರಾಮಕ್ಷತ್ರಿಯ ಸಂಘದ ಸಭಾಂಗಣದಲ್ಲಿ ನಡೆಯಿತು.
ಶ್ರೀಮತಿ ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ರಾವ್ ಸ್ವಾಗತಿಸಿ ಕಳೆದ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ನಿರ್ಗಮಿತ ಅಧ್ಯಕ್ಷ ಸುರೇಶ್ ರಾವ್ ಕಾರ್ನಾಡ್ ಸಭೆಯ ಅಜೆಂಡಾವನ್ನು ವಿವರಿಸಿದರೆ, ಕೋಶಾಧಿಕಾರಿ ರವೀಂದ್ರ ರಾವ್ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ 2026–28ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತ್ಯನಾರಾಯಣ ಹೂಡೆ ಹಾಗೂ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಸಭೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಗೌರವಿಸುವ ನಿರ್ಣಯ ಕೈಗೊಳ್ಳಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಗಸ್ಟ್ 30ರಂದು ಆಯೋಜಿಸಲು ತೀರ್ಮಾನಿಸಲಾಗಿದ್ದು, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಸೇರಿದಂತೆ ಸಮಾಜದ ಗಣ್ಯರನ್ನು ಆಹ್ವಾನಿಸಲು ಸಭೆ ಒಪ್ಪಿಗೆ ನೀಡಿತು.
ಪ್ರತಿನಿಧಿ ಸಂಘಗಳ ಅಧ್ಯಕ್ಷರಿಗೆ ಸುತ್ತೋಲೆ ಕಳುಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವುದು, ಸಂಘಟನೆಯ ಬೆಳವಣಿಗೆಗಾಗಿ ಮಹಿಳಾ ಉಪಸಮಿತಿ ಹಾಗೂ ಯುವ ಉಪಸಮಿತಿಯನ್ನು ರಚಿಸುವುದು, ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಹಾಗೂ ನೂತನ ಪದಾಧಿಕಾರಿಗಳ ಭಾವಚಿತ್ರವನ್ನು ‘ರಾಮಕ್ಷತ್ರಿಯ’ ಮಾಸಪತ್ರಿಕೆಯಲ್ಲಿ ಪ್ರಕಟಿಸುವುದಕ್ಕೂ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಗೌರವಾಧ್ಯಕ್ಷರಾದ ಸುರೇಶ್ ರಾವ್ ಕಾರ್ನಾಡ್, ಮುರಳೀಧರ ಸಿ.ಎಚ್., ಅರುಣ್ ಕುಮಾರ್ ಪುತ್ತೂರು, ಸೀತಾರಾಮ ಕೊಪ್ಪಲು, ಡಾ. ರವೀಂದ್ರ ಜೆಪ್ಪು, ಗಣಪತಿ ಬಂಟ್ವಾಳ, ಅಭಿಷೇಕ್ ಬೇಕಲ್, ಸುಜಾತ ಉಳ್ಳಾಲ, ಶೋಭಾ ಸುರೇಶ್, ರೇಖಾ ಸುದೇಶ್ ರಾವ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


