ವಿದ್ಯಾರ್ಥಿಗಳ ಸಮಸ್ಯೆಗಳ ಆಲಿಕೆಗೆ ‘ಛಾತ್ರೋಂಕಿ ಗೂಂಜ್’ ಅಭಿಯಾನ: ಎಂ.ಕಾಂ. ಕೋರ್ಸ್ ರದ್ದತಿ ವಿರುದ್ಧ ದ. ಕ ಎನ್‌ಎಸ್‌ಯುಐ ಗುಡುಗು …. !

ಮಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ “ಛಾತ್ರೋಂಕಿ ಗೂಂಜ್” (ವಿದ್ಯಾರ್ಥಿಗಳ ಧ್ವನಿ) ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಎಸ್‌ಯುಐ ಮತ್ತು ಯೂತ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಚಾಲನೆ ನೀಡಲಾಯಿತು.

ಬಳಿಕ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ , ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ಪರೀಕ್ಷಾ ವಿಭಾಗದಲ್ಲಿನ ಅಕ್ರಮಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ನೀಟ್ ಪರೀಕ್ಷೆಯ ಪೇಪರ್ ಲೀಕ್ ಪ್ರಕರಣದಿಂದ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಮಾನಸಿಕ ಒತ್ತಡ, ಆತ್ಮಹತ್ಯೆಗಳಂತಹ ಗಂಭೀರ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ಪ್ರಧಾನಮಂತ್ರಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು .

ಅಭಿಯಾನದ ಭಾಗವಾಗಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಮನವಿಯಲ್ಲಿ ನೀಟ್ ಪೇಪರ್ ಲೀಕ್ ಪ್ರಕರಣದ ಕುರಿತು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಲಾಗುವುದು ಎಂದು ಹೇಳಿದರು.

ಜುಲೈ ತಿಂಗಳಿಡೀ ಈ ಸಹಿ ಸಂಗ್ರಹ ಅಭಿಯಾನ ಮುಂದುವರಿಯಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ದೆಹಲಿಯಲ್ಲಿ ಎನ್‌ಎಸ್‌ಯುಐ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿ ನಾಯಕರೊಂದಿಗೆ “ಸಂಸತ್ ಚಲೋ” ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಂ.ಕಾಂ. ಕೋರ್ಸ್ ರದ್ದತಿಗೆ ತೀವ್ರ ವಿರೋಧ ….. !

ಶಿಕ್ಷಣ ಕಾಶಿ ಮಂಗಳೂರು ವಿಶ್ವವಿದ್ಯಾಲಯದ ಹಂಪನಕಟ್ಟೆ ಕ್ಯಾಂಪಸ್‌ನಲ್ಲಿ ಈ ಶೈಕ್ಷಣಿಕ ವರ್ಷದಿಂದ ಎಂ.ಕಾಂ. ಕೋರ್ಸ್ ಅನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸಿದೆ.

ಈಗಾಗಲೇ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಗೆ ಸಿದ್ಧರಾಗಿದ್ದರೂ ಕೋರ್ಸ್ ಸ್ಥಗಿತಗೊಳಿಸಿರುವುದು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಕಟುವಾಗಿ ಅವರು ಟೀಕಿಸಿದರು .

ಕಾಸರಗೋಡು, ಉಪ್ಪಳ, ಸುರತ್ಕಲ್, ಮುಲ್ಕಿ ಹಾಗೂ ಮೂಡುಬಿದಿರೆ ಸೇರಿದಂತೆ ವಿವಿಧ ಭಾಗಗಳಿಂದ ಬರುವ ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹಂಪನಕಟ್ಟೆ ಕ್ಯಾಂಪಸ್ ಅನುಕೂಲಕರವಾಗಿತ್ತು. ಇದೀಗ ಏಕಾಏಕಿ ಕೋರ್ಸ್ ರದ್ದುಪಡಿಸಿ ಕೋಣಾಜೆ ಕ್ಯಾಂಪಸ್‌ಗೆ ತೆರಳುವಂತೆ ಸೂಚಿಸಿರುವುದು ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ಉಂಟುಮಾಡಿದೆ ಎಂದು ಅಸಮಾಧಾನವನ್ನು ಅವರು ವಿದ್ಯಾರ್ಥಿಗಳ ಪರವಾಗಿ ಹೊರಹಾಕಿದರು .

ದಾಖಲಾತಿಗಳ ಕೊರತೆಯಿಲ್ಲದಿದ್ದರೂ ಕೋರ್ಸ್ ರದ್ದುಪಡಿಸಿರುವುದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡ ಇರುವ ಸಾಧ್ಯತೆಯಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೊದಲ ಹಂತದಲ್ಲಿ ಕುಲಪತಿ ಹಾಗೂ ರಾಜ್ಯ ಸರ್ಕಾರಕ್ಕೆ ಎಂ.ಕಾಂ. ಕೋರ್ಸ್ ಮುಂದುವರಿಸುವಂತೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಕೋರ್ಸ್ ರದ್ದತಿ ನಿರ್ಧಾರವನ್ನು ಹಿಂಪಡೆಯದಿದ್ದರೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎನ್‌ಎಸ್‌ಯುಐ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘಟನೆಯ ಪ್ರಮುಖರಾದ ಕ್ರಿಸ್ಟನ್ ಮೆನೆಜಸ್ , ಸಂತೋಷ್ ಸುಳ್ಯ , ಸಾಹಿಲ್ ಮಂಚಿಲ , ಮುಹೇಮಿನ್ , ಧನುಷ್ , ಹರ್ಷನ್ ಪೂಜಾರಿ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!