ಮಂಗಳೂರು | ಜು. 9: ಬೀದಿಬದಿ ವ್ಯಾಪಾರಿಗಳ ಮೇಲಿನ ತೆರವು ಕಾರ್ಯಾಚರಣೆ ಖಂಡಿಸಿ ಹಾಗೂ ಸಂಡೇ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ, ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಅಹೋ ರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಆರಂಭವಾಯಿತು.
ಧರಣಿಯ ವೇಳೆ ಮಹಿಳಾ ಬೀದಿಬದಿ ವ್ಯಾಪಾರಿಯೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಚುನಾವಣೆ ವೇಳೆ ಬಡವರ ಮತ ಬೇಕಾಗುತ್ತದೆ. ಆದರೆ ವಾರದಲ್ಲಿ ಒಂದು ದಿನ ವ್ಯಾಪಾರ ಮಾಡಲು ಸ್ಥಳ ಕೇಳಿದರೆ ‘ಹೊರಗಿನವರು’ ಎಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 14 ವರ್ಷಗಳಿಂದ ಸಂಡೇ ಬಜಾರ್ಗೆ ಶಾಶ್ವತ ಸ್ಥಳ ಕಲ್ಪಿಸುವಂತೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ತಮ್ಮ ಕುಟುಂಬದ ಜೀವನೋಪಾಯ ಹಾಗೂ ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಈ ವ್ಯಾಪಾರವನ್ನೇ ಅವಲಂಬಿಸಿದೆ. ಭಾನುವಾರದ ವ್ಯಾಪಾರಕ್ಕೂ ಅವಕಾಶ ನಿರಾಕರಿಸಿದರೆ ಜೀವನ ನಡೆಸುವುದು ಅಸಾಧ್ಯವಾಗಲಿದೆ ಎಂದು ಹೇಳಿದರು.
ಮಕ್ಕಳ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಸೇರಿದಂತೆ ದಿನನಿತ್ಯದ ಖರ್ಚುಗಳನ್ನು ಈ ವ್ಯಾಪಾರದ ಆದಾಯದಿಂದಲೇ ಭರಿಸುತ್ತಿದ್ದೇವೆ. ಸರ್ಕಾರದಿಂದ ಸಮರ್ಪಕ ನೆರವು ದೊರೆಯುತ್ತಿಲ್ಲ. ರೇಷನ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೂ ಪಡೆಯಲು ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅವರು ದೂರಿದರು.
ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ಸ್ಥಳ ಹಾಗೂ ಕಾನೂನುಬದ್ಧವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


