ಮಂಗಳೂರು ವಿವಿ ಪದವಿ ಫಲಿತಾಂಶ ಪ್ರಕಟ; 17,347 ವಿದ್ಯಾರ್ಥಿಗಳ ಪೈಕಿ 13,206 ಮಂದಿಯ ಫಲಿತಾಂಶ ಪ್ರಕಟ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್–ಜುಲೈ 2026ರಲ್ಲಿ ನಡೆಸಿದ ವಿವಿಧ ಪದವಿ ಕಾರ್ಯಕ್ರಮಗಳ ಆರನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. ಎಂಟನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪೂರ್ಣಗೊಂಡ ಹಿನ್ನೆಲೆ, ಸೋಮವಾರ ಫಲಿತಾಂಶವನ್ನು ಪ್ರಕಟಿಸಿದೆ.ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಕುಲಸಚಿವ ಸಂತೋಷ್ ಜಗಲಸಾರ ಅವರ ಉಪಸ್ಥಿತಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದರು.

ಬಿ.ಎಸ್ಸಿ, ಬಿ.ಕಾಂ., ಬಿ.ಎಸ್.ಡಬ್ಲ್ಯು., ಬಿ.ಸಿ.ಎ., ಬಿ.ಎಸ್‌.ಪಿ. (ಎಫ್‌ಎನ್‌ಡಿ), ಎಫ್‌ಎನ್‌ಡಿ (ಆನಿಮೇಶನ್ ಮತ್ತು ವಿಜುವಲ್ ಎಫೆಕ್ಟ್ಸ್), ಬಿ.ಎಸ್ಸಿ (ಫುಡ್ ಟೆಕ್ನಾಲಜಿ), ಬಿ.ಎಸ್ಸಿ (ಹೋಂ ಸೈನ್ಸ್), ಬಿ.ಎ. (ಎಚ್‌.ಆರ್‌.ಡಿ.), ಬಿ.ಎಸ್ಸಿ (ಫ್ಯಾಷನ್ ಡಿಸೈನ್), ಬಿ.ಎಸ್ಸಿ (ಐಡಿ ಅಂಡ್ ಡಿ), ಬಿ.ವಿ.ಎಸ್ಸಿ (ಎಚ್‌.ಎಸ್.) ಹಾಗೂ ಬಿ.ಪಿ.ಎ. ಕಾರ್ಯಕ್ರಮಗಳ ಆರನೇ ಸೆಮಿಸ್ಟರ್ ಮತ್ತು ಬಿ.ಎಚ್.ಎಂ. ಕಾರ್ಯಕ್ರಮದ ಎಂಟನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಜುಲೈ 18ರಂದು ಪೂರ್ಣಗೊಂಡಿತ್ತು.

ಮೌಲ್ಯಮಾಪನ ಪೂರ್ಣಗೊಂಡ ಎರಡು ದಿನಗಳಲ್ಲೇ ಅಂತರಿಕ ಹಾಗೂ ಪ್ರಾಯೋಗಿಕ ಅಂಕಗಳು ಮತ್ತು ಅನ್ವಯಿಸುವ ಗ್ರೇಸ್ ಮಾರ್ಕ್‌ಗಳನ್ನು ಪರಿಶೀಲಿಸಿ, ಪರೀಕ್ಷೆಗೆ ಹಾಜರಾಗಿದ್ದ 17,347 ವಿದ್ಯಾರ್ಥಿಗಳ ಪೈಕಿ 13,206 ವಿದ್ಯಾರ್ಥಿಗಳ ಫಲಿತಾಂಶವನ್ನು ಜುಲೈ 20ರಂದು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಯುಯುಸಿಎಂಎಸ್ (UUCMS) ಪೋರ್ಟಲ್‌ನಲ್ಲಿ ತಮ್ಮ ಲಾಗಿನ್ ಐಡಿ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಆರನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. ಎಂಟನೇ ಸೆಮಿಸ್ಟರ್ ಪರೀಕ್ಷೆಗಳು ಜೂನ್ 12ರಂದು ಆರಂಭಗೊಂಡು ಜುಲೈ 10ರಂದು ಮುಕ್ತಾಯಗೊಂಡಿದ್ದವು. ವಿವಿಧ ವಿಷಯಗಳ ಮೌಲ್ಯಮಾಪನ ಜೂನ್ 29ರಿಂದ ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಆರಂಭಗೊಂಡಿದ್ದು, ಉಳಿದ ಕಾರ್ಯಕ್ರಮಗಳ ಮೌಲ್ಯಮಾಪನ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.

ಬಿ.ಎ. (ಎಎಲ್‌ಪಿ) ಎಂಟನೇ ಸೆಮಿಸ್ಟರ್, ಬಿ.ಎ./ಬಿ.ಬಿ.ಎ. ಆರನೇ ಸೆಮಿಸ್ಟರ್, ಜಿಲ್ಲಾ ಪದವಿಗಳ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಮತ್ತು ನಾನ್-ಎನ್‌ಇಪಿ ಕಾರ್ಯಕ್ರಮಗಳ ಪುನರಾವರ್ತಿತ-2 ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ.

ಈ ಬಾರಿ ಮೌಲ್ಯಮಾಪನ ಕೇಂದ್ರಗಳಲ್ಲಿಯೇ ಅಂಕಗಳ ದಾಖಲಾತಿಯನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕ ಸಂಪೂರ್ಣ ಗಣಕೀಕರಣಗೊಳಿಸಿರುವುದರಿಂದ, ಮೌಲ್ಯಮಾಪನ ನಡೆಯುತ್ತಿದ್ದಂತೆಯೇ ಫಲಿತಾಂಶವನ್ನು ಅತಿ ಕಡಿಮೆ ಅವಧಿಯಲ್ಲಿ ಪ್ರಕಟಿಸಲು ಸಾಧ್ಯವಾಗಿದೆ. ಮೌಲ್ಯಮಾಪನ ಕೇಂದ್ರಗಳ ಕಸ್ಟೋಡಿಯನ್‌ಗಳು, ಸಂಯೋಜಕರು, ಪರೀಕ್ಷಾ ಮಂಡಳಿ ಅಧ್ಯಕ್ಷರು, ಮೌಲ್ಯಮಾಪಕರು ಹಾಗೂ ಪರೀಕ್ಷಾಂಗ ವಿಭಾಗದ ಸಿಬ್ಬಂದಿಯ ಸಹಕಾರದಿಂದ ನಿಗದಿತ ವೇಳೆಯಲ್ಲೇ ಮೌಲ್ಯಮಾಪನ ಪೂರ್ಣಗೊಂಡಿದೆ ಎಂದು ವಿವಿ ತಿಳಿಸಿದೆ.

ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಮರುಮೌಲ್ಯಮಾಪನ ಅರ್ಜಿಗಳನ್ನು ಉಳಿದ ಎಲ್ಲಾ ಫಲಿತಾಂಶಗಳು ಪ್ರಕಟವಾದ ಬಳಿಕ ಆಹ್ವಾನಿಸಲಾಗುವುದು. ಈ ಕುರಿತು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ. ಎಚ್. ದೇವೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!