ಮಂಗಳೂರು ಯುದ್ಧ ಸ್ಮಾರಕದಲ್ಲಿ T-55 ಯುದ್ಧ ಟ್ಯಾಂಕ್ ಪ್ರದರ್ಶನ , ಮುಂದಿನ ವರ್ಷ ಯುದ್ಧ ವಿಮಾನ ಅನಾವರಣಕ್ಕೆ ಪ್ರಯತ್ನ: ಕ್ಯಾಪ್ಟನ್ ಗಣೇಶ್ ಕಾರ್ನಿಕ್

ಮಂಗಳೂರು: ಮಂಗಳೂರಿನ ಯುದ್ಧ ಸ್ಮಾರಕದಲ್ಲಿ ಭಾರತೀಯ ಸೇನೆಯ ಐತಿಹಾಸಿಕ T-55 ಯುದ್ಧ ಟ್ಯಾಂಕ್ ಅನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದ್ದು, ಮುಂದಿನ ವರ್ಷ ಇದೇ ಸ್ಮಾರಕದಲ್ಲಿ ಯುದ್ಧ ವಿಮಾನವನ್ನೂ ಅನಾವರಣಗೊಳಿಸುವ ಉದ್ದೇಶವಿದೆ ಎಂದು ಮಾಜಿ ಶಾಸಕ ಹಾಗೂ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ವಿಶೇಷ ಪ್ರಯತ್ನದ ಫಲವಾಗಿ ಸೋವಿಯತ್ ಮೂಲದ T-55 ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಯುದ್ಧ ಸ್ಮಾರಕಕ್ಕೆ ತರಲಾಗಿದೆ ಎಂದರು.

1965-66ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಈ ಟ್ಯಾಂಕ್ 2011ರವರೆಗೆ ಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಆಗಿ ಸೇವೆ ಸಲ್ಲಿಸಿತು. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಈ ಟ್ಯಾಂಕ್ ಮಹತ್ವದ ಪಾತ್ರ ವಹಿಸಿದ್ದು, ಮರುಭೂಮಿ ಹಾಗೂ ಸಮತಟ್ಟಾದ ಪ್ರದೇಶಗಳಲ್ಲಿ ರಕ್ಷಣಾತ್ಮಕ ಮತ್ತು ದಾಳಿಯ ಕಾರ್ಯಾಚರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಯಿತು ಎಂದು ವಿವರಿಸಿದರು.

“ಟ್ಯಾಂಕ್ ಬಗ್ಗೆ ಕೇಳಿರುವವರು ಹಲವರಿದ್ದಾರೆ. ಆದರೆ ಅದನ್ನು ಹತ್ತಿರದಿಂದ ವೀಕ್ಷಿಸಿರುವ ಅನುಭವ ಬಹುತೇಕರಿಗೆ ಇಲ್ಲ. ಮಂಗಳೂರಿನ ಜನರಿಗೆ ಈಗ ಟ್ಯಾಂಕ್ ಅನ್ನು ಸಮೀಪದಿಂದ ನೋಡಿ ಅದರ ಕಾರ್ಯವೈಖರಿ ಮತ್ತು ವೈಶಿಷ್ಟ್ಯಗಳನ್ನು ಅರಿಯುವ ಅವಕಾಶ ದೊರೆಯಲಿದೆ,” ಎಂದು ಅವರು ಹೇಳಿದರು.

ಮುಂದಿನ ಗುರಿ ಯುದ್ಧ ವಿಮಾನ …. !

ಯುದ್ಧ ಸ್ಮಾರಕದ ಒಂದು ಬದಿಯಲ್ಲಿ ಟ್ಯಾಂಕ್ ಸ್ಥಾಪಿಸಿರುವಂತೆ, ಇನ್ನೊಂದು ಬದಿಯಲ್ಲಿ ಯುದ್ಧ ವಿಮಾನವನ್ನು ಸ್ಥಾಪಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಕಾರ್ಗಿಲ್ ವಿಜಯ ದಿವಸದ ವೇಳೆಗೆ ವಿಮಾನವನ್ನು ಅನಾವರಣಗೊಳಿಸುವ ಆಶಯವಿದೆ ಎಂದು ಕಾರ್ನಿಕ್ ತಿಳಿಸಿದರು.

ಯುದ್ಧ ಟ್ಯಾಂಕ್‌ನ ಒಳಭಾಗ ಅತ್ಯಂತ ಇಕ್ಕಟ್ಟಾಗಿದ್ದು, ಮರುಭೂಮಿ ಪ್ರದೇಶಗಳಲ್ಲಿ 45ರಿಂದ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿಯೂ ಸೈನಿಕರು ಕರ್ತವ್ಯ ನಿರ್ವಹಿಸಬೇಕಾಗುತ್ತಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶರಕ್ಷಣೆಗಾಗಿ ಸೈನಿಕರು ಅನುಭವಿಸುವ ತ್ಯಾಗ ಮತ್ತು ಶ್ರಮವನ್ನು ಸಾರ್ವಜನಿಕರು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಟ್ಯಾಂಕ್ ಅನ್ನು ಪ್ರದರ್ಶನಕ್ಕೆ ಇರಿಸಲಾಗಿದೆ ಎಂದು ಹೇಳಿದರು.

ಯುದ್ಧ ಸ್ಮಾರಕಗಳು ಕೇವಲ ಸ್ಮರಣಾರ್ಥ ನಿರ್ಮಿತ ಸ್ಥಳಗಳಲ್ಲ; ಯುವಜನರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಸೈನಿಕರ ಬಗ್ಗೆ ಗೌರವದ ಮನೋಭಾವ ಬೆಳೆಸುವ ಕೇಂದ್ರಗಳಾಗಬೇಕು. ಇದೇ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಸೇವೆಯಿಂದ ನಿವೃತ್ತಗೊಂಡ ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಹಾಗೂ ನೌಕೆಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಒದಗಿಸುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಕಾರ್ಗಿಲ್ ವಿಜಯ ದಿವಸ ಹಾಗೂ ವಿಜಯ ದಿವಸದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶಭಕ್ತಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

T-55 ಟ್ಯಾಂಕ್ ವೈಶಿಷ್ಟ್ಯ … !

ಭಾರತೀಯ ಸೇನೆಯ ಶಸ್ತ್ರಸಜ್ಜಿತ ದಳದ ಪ್ರಮುಖ ಯುದ್ಧ ಟ್ಯಾಂಕ್ ಆಗಿದ್ದ T-55 ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. 2011ರಲ್ಲಿ ಅಧಿಕೃತವಾಗಿ ಸೇವೆಯಿಂದ ನಿವೃತ್ತಿಗೊಂಡ ಈ ಟ್ಯಾಂಕ್, 1971ರ ಭಾರತ-ಪಾಕಿಸ್ತಾನ ಯುದ್ಧದ ಗರೀಬ್‌ಪುರ, ನೈನಕೋಟ್ ಹಾಗೂ ಬಸಂತರ್ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ಕಾರ್ನಿಕ್ ಹೇಳಿದರು.

ಟ್ಯಾಂಕ್‌ನ ತಾಂತ್ರಿಕ ವೈಶಿಷ್ಟ್ಯಗಳಲ್ಲಿ 36 ಟನ್ ತೂಕ, 100 ಮಿ.ಮೀ. ಮುಖ್ಯ ಗನ್, 7.62 ಮಿ.ಮೀ. ಸಹಾಯಕ ಮೆಷಿನ್‌ಗನ್, 12.7 ಮಿ.ಮೀ. ಆಂಟಿ-ಏರ್‌ಕ್ರಾಫ್ಟ್ ಗನ್, 520ರಿಂದ 580 ಹಾರ್ಸ್‌ಪವರ್ ಸಾಮರ್ಥ್ಯದ ಡೀಸೆಲ್ ಎಂಜಿನ್, ಗಂಟೆಗೆ 50 ಕಿ.ಮೀ. ಗರಿಷ್ಠ ವೇಗ ಹಾಗೂ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುವ ವ್ಯವಸ್ಥೆ ಸೇರಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಟರನ್ ಶ್ರೀಕಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ವೆಟರನ್ ಸುಧೀರ್ ಪೈ ಹಾಗೂ ಉಪಾಧ್ಯಕ್ಷ ಕರ್ನಲ್ ಎ.ಕೆ. ಜಯಚಂದ್ರನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!