ಸೆ.14ರಿಂದ 16ರವರೆಗೆ ಕೋಡಿಕಲ್ ಹಿಂದೂ ಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು:* ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕೋಡಿಕಲ್ ಶಾಖೆ ಮತ್ತು ಹಿಂದೂ ಗಣೇಶೋತ್ಸವ ಸಮಿತಿ ವತಿಯಿಂದ ಕಳೆದ 17 ವರ್ಷಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ‘ಕೋಡಿಕಲ್ ಹಿಂದೂ ಗಣೇಶೋತ್ಸವ’ ಈ ಬಾರಿ ಸೆಪ್ಟೆಂಬರ್ 14ರಿಂದ 16ರವರೆಗೆ ನಡೆಯಲಿದೆ.

ಸೆ.14ರ ಸೋಮವಾರ ಬೆಳಗ್ಗೆ ವೇದಮೂರ್ತಿ ವಿಶ್ವಕುಮಾರ್ ಜೋಯಿಸರ ಪೌರೋಹಿತ್ಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಸೆ.16ರ ಬುಧವಾರ ಸಂಜೆ ವೈಭವದ ಶೋಭಾಯಾತ್ರೆಯ ಮೂಲಕ ಮೂರ್ತಿಯನ್ನು ಕೊಂಡೊಯ್ದು ದಂಬೆಲ್‌ನ ಫಲ್ಗುಣಿ ನದಿಯಲ್ಲಿ ಜಲಸ್ತಂಭನ ಮಾಡಲಾಗುವುದು ಎಂದು ಹಿಂದೂ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಸೇವಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಆ.30ರಂದು ಗಣೇಶ ಕ್ರೀಡೋತ್ಸವ

ಉತ್ಸವದ ಅಂಗವಾಗಿ ಆ.30ರಂದು ಕೋಡಿಕಲ್‌ನ ಸರ್ಕಾರಿ ಶಾಲೆಯಲ್ಲಿ ಶ್ರೀ ಗಣೇಶ ಕ್ರೀಡೋತ್ಸವ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ದೈಹಿಕ ಮತ್ತು ಬೌದ್ಧಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸ್ಪರ್ಧೆಗಳ ವಿಜೇತರಿಗೆ ಗಣೇಶ ಮಂಟಪದಲ್ಲಿ ಬಹುಮಾನ ವಿತರಿಸಲಾಗುವುದು. ಗಣ್ಯರು ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಮಾಜಮುಖಿ ಸೇವಾ ಚಟುವಟಿಕೆ

ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವು ನೀಡುವುದು, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಹಾಗೂ ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆಗೆ ಸದಾ ಸಿದ್ಧವಾಗಿರುವ ರಕ್ತದಾನಿಗಳ ತಂಡವನ್ನು ರೂಪಿಸುವುದು ಸಮಿತಿಯ ಪ್ರಮುಖ ಸೇವಾ ಚಟುವಟಿಕೆಗಳಾಗಿವೆ.

ಬಾಲ ಸಂಸ್ಕಾರ ಶಿಬಿರಗಳ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಹಾಗೂ ಧರ್ಮಾಭಿಮಾನವನ್ನು ಬೆಳೆಸುವ ಕಾರ್ಯ, ಗೋ ರಕ್ಷಾ ಅಭಿಯಾನ, ‘ವಂದೇ ಗೋಮಾತರಂ’ ಹಾಗೂ ಗೋಪೂಜೆಗಳ ಮೂಲಕ ಕೃಷಿ-ಋಷಿ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ‘ಭಜನೆಯಿದ್ದಲ್ಲಿ ವಿಭಜನೆಯಿಲ್ಲ’ ಎಂಬ ಆಶಯದೊಂದಿಗೆ ಮನೆಮನೆ ಭಜನೆ ಹಾಗೂ ಧಾರ್ಮಿಕ ಪ್ರಜ್ಞಾ ಕೇಂದ್ರಗಳಲ್ಲಿ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಕೀರ್ತನೆಯ ಮಹತ್ವವನ್ನು ಸಾರಲಾಗುತ್ತಿದೆ. ದೇಶ-ಧರ್ಮದ ವಿಚಾರದಲ್ಲಿ ಸಾಮಾಜಿಕ ಹೋರಾಟಗಳಲ್ಲೂ ಸಮಿತಿ ತೊಡಗಿಸಿಕೊಂಡಿದೆ ಎಂದು ರವಿ ಅಲೆವೂರಾಯ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸೆ.14ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ರಂಗಪೂಜೆಯ ಬಳಿಕ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಚಿತ್ರಾಪುರದ ಸತ್ಯಕಥೆಯನ್ನು ಆಧರಿಸಿದ ತುಳು ಪೌರಾಣಿಕ ನಾಟಕ ‘ಪೊರಿಪುದಪ್ಪೆ ಜಲದುರ್ಗೆ’ ಪ್ರದರ್ಶನಗೊಳ್ಳಲಿದೆ.

ಸೆ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಾಪೂಜೆಯ ಬಳಿಕ ಶಾರದಾ ಆರ್ಟ್ಸ್ ಕಲಾವಿದರು (ರಿ.), ಮಂಜೇಶ್ವರ ಇವರಿಂದ ತುಳು ಹಾಸ್ಯ ನಾಟಕ ‘ಒಂತೆ ಲೇಟಾಂಡ್’ ಪ್ರದರ್ಶನಗೊಳ್ಳಲಿದೆ.

ಸೆ.16ರಂದು ವೈಭವದ ಶೋಭಾಯಾತ್ರೆ

ಸೆ.16ರಂದು ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ಗಣೇಶ ಮಂಟಪದಿಂದ ಶ್ರೀ ವಿನಾಯಕನ ವೈಭವದ ಶೋಭಾಯಾತ್ರೆ ಆರಂಭವಾಗಲಿದೆ. ಕೋಡಿಕಲ್‌ನ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಉರ್ವಸ್ಟೋರ್‌ಗೆ ತಲುಪಿ, ಅಲ್ಲಿಂದ ಅಶೋಕನಗರದ ಮೂಲಕ ದಂಬೆಲ್‌ನ ಫಲ್ಗುಣಿ ನದಿಗೆ ತೆರಳಲಿದೆ. ಅಲ್ಲಿ ಗಣೇಶ ಮೂರ್ತಿಯ ಜಲಸ್ತಂಭನದೊಂದಿಗೆ ಮೂರು ದಿನಗಳ ಉತ್ಸವ ಸಂಪನ್ನಗೊಳ್ಳಲಿದೆ.

ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಅತಿಥಿಗಳು ಉತ್ಸವದಲ್ಲಿ ಭಾಗವಹಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವೈಭವದ ಶೋಭಾಯಾತ್ರೆ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಹಾಗೂ ನಿಕಟಪೂರ್ವ ಮೇಯರ್ *ಮನೋಜ್ ಕುಮಾರ್, ಗೌರವಾಧ್ಯಕ್ಷ **ಕಿರಣ್ ಜೋಗಿ, ಉಪಾಧ್ಯಕ್ಷರಾದ *ಸತೀಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಹಾಗೂ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!