ಮಂಗಳೂರು, ಆ.24: ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 16,46,387 ಮತದಾರರು ಪಟ್ಟಿಯಲ್ಲಿದ್ದಾರೆ. ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಪಡೀಲ್‌ನ ಪ್ರಜಾಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆ.24ರಿಂದ ಸೆ.23ರವರೆಗೆ ನೋಟಿಸ್ ವಿತರಣೆ, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ ಎಂದು ತಿಳಿಸಿದರು. ಮ್ಯಾಪಿಂಗ್ ಆಗದಿರುವುದು, ಹೆಸರು ಅಥವಾ ಪೋಷಕರ ಹೆಸರಿನ ಬದಲಾವಣೆ, ವಯಸ್ಸಿನ ವ್ಯತ್ಯಾಸ ಸೇರಿದಂತೆ ವಿವಿಧ ತಾರ್ಕಿಕ ದೋಷಗಳಿಂದ ಕೆಲವು ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿವೆ. ನೋಟಿಸ್‌ನಲ್ಲಿ ವಿಚಾರಣೆಯ ದಿನಾಂಕ, ಸಮಯ ಹಾಗೂ ಸ್ಥಳದ ವಿವರಗಳನ್ನು ನೀಡಲಾಗುತ್ತದೆ. ಬಿಎಲ್‌ಒಗಳು ನಿಗದಿತ ಅವಧಿಯಲ್ಲಿ ಮತದಾರರ ಮನೆಗಳಿಗೆ ನೋಟಿಸ್ ತಲುಪಿಸಲಿದ್ದಾರೆ.

ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಮತದಾರರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಈ ಅವಕಾಶವನ್ನೂ ಬಳಸಿಕೊಳ್ಳದಿದ್ದಲ್ಲಿ ನಿಯಮಾನುಸಾರ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಮತದಾರರು ವಿಚಾರಣೆಗೆ ಹಾಜರಾಗುವಾಗ ಅಗತ್ಯ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ವಿವರಗಳನ್ನು ಸಲ್ಲಿಸಬೇಕು. ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲು ಅವಕಾಶವಿದ್ದರೂ, ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಮುಂದೆ ಭೌತಿಕವಾಗಿ ಹಾಜರಾಗುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು.
1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆ ಸಲ್ಲಿಸಬೇಕು. 1987ರ ಜುಲೈ 1ರಿಂದ 2004ರ ಡಿಸೆಂಬರ್ 2ರೊಳಗೆ ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳದ ದಾಖಲೆಗಳ ಜತೆಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಕರಡು ಪಟ್ಟಿಯಲ್ಲಿರುವ 16,46,387 ಮತದಾರರ ಪೈಕಿ 8,07,600 ಪುರುಷರು, 8,38,768 ಮಹಿಳೆಯರು ಹಾಗೂ 19 ತೃತೀಯ ಲಿಂಗದ ಮತದಾರರು ಇದ್ದಾರೆ.

2026ರ ಜೂ.16ರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,03,766 ಮತದಾರರಿದ್ದರು. ಅಷ್ಟೇ ಸಂಖ್ಯೆಯಲ್ಲಿ ಎನುಮರೇಶನ್ ಫಾರಂಗಳನ್ನು ಹಂಚಿಕೆ ಮಾಡಲಾಗಿದ್ದು, 16,46,387 ಫಾರಂಗಳನ್ನು ಡಿಜಿಟೈಸ್ ಮಾಡಲಾಗಿದೆ. ಇದು ಶೇ.91.27ರಷ್ಟಾಗಿದೆ. 1,57,379 ಮತದಾರರನ್ನು ಎಎಸ್‌ಡಿಡಿ ಎಂದು ಗುರುತಿಸಲಾಗಿದ್ದು, 11,124 ಮಂದಿ ಗೈರು ಮತದಾರರು, 82,988 ಮಂದಿ ಶಾಶ್ವತವಾಗಿ ವಲಸೆ ಹೋದವರು, 45,318 ಮಂದಿ ಮೃತಪಟ್ಟವರು ಹಾಗೂ 15,395 ಮಂದಿ ಬೇರೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರಾಗಿದ್ದಾರೆ. ಇತರ ಕಾರಣಗಳಿಂದ 2,554 ಮಂದಿ ಹೊರಗುಳಿದಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 154 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

2026ರ ಜೂನ್‌ವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ಹೆಸರಿನ ಬದಲಾವಣೆ ಸೇರಿದಂತೆ ಇತರ ಕಾರಣಗಳಿಂದ ಕರಡು ಪಟ್ಟಿಯಿಂದ ಹೆಸರು ಹೊರಗುಳಿದಿದ್ದರೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಬಂದ ಮಾತ್ರಕ್ಕೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ ಎಂದರ್ಥವಲ್ಲ. ಆದ್ದರಿಂದ ಮತದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರನ್ನು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ ಅಂತಿಮ ಪಟ್ಟಿಯಲ್ಲಿ ಹೆಸರು ಪ್ರಕಟಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

