ದಸರಾ ರಜೆ ಕಡಿತಗೊಳಿಸಿ ಶಾಲೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಮಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ರಜೆಯನ್ನು ಕಡಿತಗೊಳಿಸಿ ತರಗತಿ ಹಾಗೂ ಪರೀಕ್ಷೆ ನಡೆಸುತ್ತಿರುವ ಶಾಲೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.

ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕ್ರಿಶ್ಚಿಯನ್ ಕಾನ್ವೆಂಟ್ ಹಾಗೂ ಅನುದಾನಿತ ಶಾಲೆಗಳು ದಸರಾ ರಜೆಯನ್ನು ಕಡಿತಗೊಳಿಸಿ ತರಗತಿ ಮತ್ತು ಪರೀಕ್ಷೆ ನಡೆಸುತ್ತಿವೆ. ಇದರಿಂದ ಈ ಶಾಲೆಗಳಲ್ಲಿ ಓದುತ್ತಿರುವ ಹಿಂದೂ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ. ಇದು ಹಿಂದೂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಕ್ಕಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ದಸರಾ ರಜೆಯನ್ನು ಕಡಿತಗೊಳಿಸದಂತೆ ಶಿಕ್ಷಣ ಇಲಾಖೆ ಹಾಗೂ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೂ ರಜೆ ಕಡಿತಗೊಳಿಸಿ ಶಾಲೆ ನಡೆಸಿದರೆ ಅಂತಹ ಶಾಲೆಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಕ್ರಿಸ್ಮಸ್‌ಗೂ ಒಂದೇ ದಿನ ರಜೆ ನೀಡಬೇಕು ಎಂದು ಆಗ್ರಹಿಸಿದರು.

ರಾಮಸೇನೆ ಹಾಗೂ ಶ್ರೀರಾಮಸೇನೆ ಇನ್ನು ಮುಂದೆ ಒಗ್ಗೂಡಿ ಶ್ರೀರಾಮಸೇನೆಯಾಗಿ ಕಾರ್ಯನಿರ್ವಹಿಸಲಿವೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸುವುದರ ಜೊತೆಗೆ ಇತರ ಹಿಂದೂ ಸಂಘಟನೆಗಳೊಂದಿಗೆ ಕೈಜೋಡಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ ಮುತಾಲಿಕ್, ಗಣೇಶೋತ್ಸವಕ್ಕೂ ಹಲವು ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಹಿಂದೂ ಕಾರ್ಯಕರ್ತರ ವಿರುದ್ಧ ವ್ಯವಸ್ಥಿತವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಾಗಿ ತಿಳಿಸಿದ ಅವರು, ಪುತ್ತೂರಿನ ಯುವತಿ ಪ್ರಕರಣದಲ್ಲಿ ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಸುರೇಶ್‌, ಪರಶುರಾಮ, ಕಿರಣ್‌, ಸಂತೋಷ್‌ ಶೆಟ್ಟಿ, ಪ್ರದೀಪ್‌, ಲೋಕೇಶ್ ಮತ್ತಿತರರು ಇದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!