ಮಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಗೌರವ: 65 ಮಹಿಳಾ ಕಾರ್ಮಿಕರಿಗೆ ಸೀರೆ ವಿತರಣೆ

ಮಂಗಳೂರು, ಅ.2: ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ರಾಮಕೃಷ್ಣ ಮಠದ ಪ್ರೇರಣೆಯೊಂದಿಗೆ ಮುನ್ನಡೆಯುತ್ತಿರುವ ‘ಸ್ವಚ್ಛ ಮಂಗಳೂರು ಪ್ರತಿಷ್ಠಾನ’ ವತಿಯಿಂದ ನಗರದ ಸ್ವಚ್ಛತೆಗಾಗಿ ಪ್ರತಿದಿನ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸುವ ‘ಅರ್ಪಣ’ ಕಾರ್ಯಕ್ರಮ ಶುಕ್ರವಾರ ನಗರದ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಮೊದಲ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ 65 ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಐಎಎಸ್ ಉದ್ಘಾಟಿಸಿದರು. ಮಾತನಾಡಿದ ಅವರು, “ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಪ್ರತಿಷ್ಠಾನವು ಸ್ವಚ್ಛತೆ ಹಾಗೂ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಕುರಿತು ಉತ್ತಮ ಜಾಗೃತಿ ಮೂಡಿಸುತ್ತಿದೆ. ನಗರದ ಸ್ವಚ್ಛತೆಗಾಗಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಅವರಿಗೆ ಗೌರವ ಹಾಗೂ ಮೆಚ್ಚುಗೆ ಸಲ್ಲಿಸುವುದು ಅತ್ಯಂತ ಮಹತ್ವದ ಕಾರ್ಯ. ಪ್ರತಿಯೊಬ್ಬ ನಾಗರಿಕರೂ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವುದರ ಜತೆಗೆ ಸ್ವಚ್ಛತೆ ಕಾಪಾಡುವಲ್ಲಿ ಹಾಗೂ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವಲ್ಲಿ ಸಹಕಾರ ನೀಡಬೇಕು. ಗಾಂಧೀಜಿಯವರ ಜನ್ಮದಿನದಂತಹ ಮಹತ್ವದ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವ ಸ್ವಚ್ಛ ಮಂಗಳೂರು ಪ್ರತಿಷ್ಠಾನವನ್ನು ಅಭಿನಂದಿಸುತ್ತೇನೆ,” ಎಂದರು.

ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಮಾತನಾಡಿ, “ಸ್ವಚ್ಛತಾ ಕೆಲಸ ನಿಜವಾದ ದೇವರ ಸೇವೆ. ಪ್ರತಿನಿತ್ಯ ಇಂತಹ ಪವಿತ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಮಾತೆಯರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಗರದ ಸ್ವಚ್ಛತೆಗಾಗಿ ತಮ್ಮ ಶ್ರಮವನ್ನು ಅರ್ಪಿಸುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸುವ ‘ಅರ್ಪಣ’ ಕಾರ್ಯಕ್ರಮವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ವಯಂಸೇವಕರು ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ,” ಎಂದರು.

ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, “ನಗರ ಸ್ವಚ್ಛವಾಗಿರಲು ಪ್ರತಿದಿನ ಮುಂಜಾನೆಯಿಂದಲೇ ಶ್ರಮಿಸುವ ಪೌರಕಾರ್ಮಿಕರ ಸೇವೆ ನಮ್ಮೆಲ್ಲರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಅವರ ಶ್ರಮವನ್ನು ಕೇವಲ ಗುರುತಿಸುವುದಷ್ಟೇ ಅಲ್ಲದೆ, ಸಮಾಜದಲ್ಲಿ ಅವರಿಗೆ ಗೌರವದ ಸ್ಥಾನ ನೀಡುವುದು ನಮ್ಮ ಜವಾಬ್ದಾರಿ. ‘ಅರ್ಪಣ’ ಕಾರ್ಯಕ್ರಮದ ಮುಂದಿನ ಹಂತದಲ್ಲಿ ಸ್ವಚ್ಛ ಮಂಗಳೂರು ತಂಡದ ಸ್ವಯಂಸೇವಕರು ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುವ ಸ್ಥಳಗಳಿಗೆ ಹಾಗೂ ಅವರ ಮನೆಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ,” ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರು ಹಾಗೂ ಗ್ರೂಪ್–4 ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆನಂದ್ ಎಸ್.ಪಿ. ಮಾತನಾಡಿ, “ಸ್ವಚ್ಛ ಮಂಗಳೂರು ತಂಡದ ಈ ಕಾರ್ಯಕ್ರಮ ನಮ್ಮ ಹೃದಯವನ್ನು ಮುಟ್ಟಿದೆ. ಮಂಗಳೂರಿನ ಸ್ವಚ್ಛತೆಗಾಗಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಮಹತ್ವದ ಸೇವೆಯನ್ನು ಗುರುತಿಸಿ ಗೌರವಿಸುವುದರ ಜತೆಗೆ, ನಗರ ಸ್ವಚ್ಛತಾ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸುವ ಮನೋಭಾವವನ್ನು ಸ್ವಚ್ಛ ಮಂಗಳೂರು ತಂಡ ತೋರಿಸಿದೆ. ಇದು ನಮಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ,” ಎಂದರು.

ಕಾರ್ಯಕ್ರಮವನ್ನು ಚೇತನ್ ಶೆಟ್ಟಿ ನಿರ್ವಹಿಸಿದರು. ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಟ್ರಸ್ಟಿ ದಿಲ್ರಾಜ್ ಆಳ್ವ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ಕಿರಣ್ ಗಿರಿಧರ್, ಸ್ವಚ್ಛ ಮಂಗಳೂರಿನ ಸಂಚಾಲಕ ರಂಜನ್ ಬೆಳ್ಳರ್ಪಾಡಿ ಹಾಗೂ ಸಚಿನ್ ಶೆಟ್ಟಿ ಸಹಕರಿಸಿದರು.

ಮುಂದಿನ ಹಂತದಲ್ಲಿ ಮನೆ–ಮನೆಗೆ ‘ಅರ್ಪಣ’

‘ಅರ್ಪಣ’ ಕಾರ್ಯಕ್ರಮದ ಮುಂದಿನ ಹಂತದಲ್ಲಿ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಮನೆಗಳಿಗೆ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ವಯಂಸೇವಕರು ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಈ ಯೋಜನೆಯನ್ನು ಸ್ವಚ್ಛ ಮಂಗಳೂರು ತಂಡದ ಸ್ವಯಂಸೇವಕರಾದ ಕಮಲಾಕ್ಷ ಪೈ, ಸೌರಾಜ್ ಮಂಗಳೂರು, ದಾಮೋದರ್ ಭಟ್, ಉದಯ್ ಕೆ.ಪಿ., ತಾರಾನಾಥ್ ಆಳ್ವ, ಬಾಲಕೃಷ್ಣ ಭಟ್, ಸುರೇಶ್ ಪ್ರಭು, ಸುನಂದಾ ಶಿವರಾಮ್, ರಾಜೀವ್ ಚಂದ್ರಶೇಖರ್, ಸತ್ಯವತಿ, ಡಾ. ದಾನೇಶ್ ಕುಮಾರ್, ಬೆಳ್ಳಾಳ ಗೋಪಿನಾಥ್ ರಾವ್, ಸತ್ಯನಾರಾಯಣ ಕೆ.ವಿ., ಮುರಳಿ, ಪ್ರೊ. ಬಬಿತಾ ಶೆಟ್ಟಿ, ನವೀನ ಶೆಟ್ಟಿ, ಪ್ರಥಮ್ ಪೂಜಾರಿ ಹಾಗೂ ಶ್ರೀಹರ್ಷ ನೆರವೇರಿಸಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!