ಬಂಟ್ವಾಳ,ಕೊಳ್ನಾಡು: ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 32 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ, ಕಾಳಜಿ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸಿ, ಸಾವಿರಾರು ಮಕ್ಕಳ ಬದುಕಿನಲ್ಲಿ ಜ್ಞಾನದ ಬೆಳಕು ಮೂಡಿಸಿದ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಬಿ.ಬಿ. ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಕೊಳ್ನಾಡು ಗ್ರಾಮದ ಲಕ್ಷ್ಮೀಕೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

1994ರ ಜುಲೈ 22ರಂದು ಸರ್ಕಾರಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದ ಚಂದ್ರಾವತಿ ಅವರು ಕೊಡಗು ಜಿಲ್ಲೆಯ ಮಾಯಮುಡಿ, ವಿರಾಜಪೇಟೆ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮದ ಬಾಳೆಪುಣಿ ಶಾಲೆಯಲ್ಲಿ 13 ವರ್ಷ, ಇರಾ ಗ್ರಾಮದ ಬಾಳಪುಣಿಯಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, ದ.ಕ.ಜಿ.ಪ. ಮೂಳೂರು ಹಾಗೂ ಲಕ್ಷ್ಮೀಕೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಗುರುತಿಸಿಕೊಂಡಿದ್ದರು.

ಪಠ್ಯ ಬೋಧನೆಯಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಪ್ರೋತ್ಸಾಹ ನೀಡುತ್ತಿದ್ದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬುಲ್‌ಬುಲ್ ವಿಭಾಗದಲ್ಲಿ ಪ್ರಾಥಮಿಕ ಹಾಗೂ ಮುಂದುವರಿದ ತರಬೇತಿ ಪಡೆದು ಮಕ್ಕಳಿಗೆ ಮಾರ್ಗದರ್ಶನ ನೀಡಿದ ಅವರ ಶ್ರಮದಿಂದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ವರ್ಣಗರಿ ಪ್ರಶಸ್ತಿ, ರಾಜ್ಯ ಮಟ್ಟದ ಹಿರಕ್ಕ್ ಗರಿ ಪ್ರಶಸ್ತಿ ಹಾಗೂ ರಾಷ್ಟ್ರಪತಿಗಳಿಂದ ಪ್ರದಾನವಾಗುವ ಚಿನ್ನದ ಬಾಣ ಪ್ರಶಸ್ತಿ ಪಡೆಯುವಂತಾಯಿತು.

ಶಿಕ್ಷಕಿಯಾಗಿ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿಯೂ ತಮ್ಮ ಪ್ರತಿಭೆ ಮೆರೆದಿರುವ ಚಂದ್ರಾವತಿ ಅವರು, ಸರ್ಕಾರಿ ನೌಕರರ ಸಂಘದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬೋಧನೋಪಕರಣಗಳ ತಯಾರಿ, ಖೋ-ಖೋ, ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿರುವ ಅವರು, ಕರಕುಶಲ ವಸ್ತುಗಳ ತಯಾರಿ ಮತ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸತತ ಏಳು ಬಾರಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ. 2024ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಅವರ ಸಾಧನೆಯ ಮತ್ತೊಂದು ಹೆಗ್ಗುರುತಾಗಿದೆ.


ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ರೈ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, ಚಂದ್ರಾವತಿ ಅವರ ಬಹುಮುಖ ಪ್ರತಿಭೆ, ಮಕ್ಕಳ ಮೇಲಿನ ಕಾಳಜಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. “ಶಿಕ್ಷಕರ ಸಾಧನೆ ಎಂದರೆ ಅವರು ಕಲಿಸಿದ ಮಕ್ಕಳಲ್ಲಿ ಮೂಡುವ ಜ್ಞಾನ, ಆತ್ಮವಿಶ್ವಾಸ ಮತ್ತು ಸಾಧನೆಯೇ ಆಗಿದೆ. ಇಂತಹ ಶಿಕ್ಷಕಿಯ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಯಿಂದ ಗೌರವಿಸಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟ ಅವರು, ಶಿಕ್ಷಕಿಗೆ ಗೌರವ ಸನ್ಮಾನ ಸಲ್ಲಿಸಿದರು.
ನಂತರ ಕೊಳ್ನಾಡು ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ಕೆ.ಎ. ಅಸ್ಮ ಹಸೈನಾರ್ ಹಾಗೂ ಮಹಮ್ಮದ್ ಮಂಚಿ ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಸವಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕಿಗೆ “ಮಿಸ್ ಯೂ ಶಿಕ್ಷಕಿ” ಎಂಬ ಭಾವಪೂರ್ಣ ಮಾತುಗಳೊಂದಿಗೆ ಭಾಷಣಗಳನ್ನು ಅರ್ಪಿಸಿ, ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಾವತಿ ಬಿ.ಬಿ. ಅವರು, ತಮ್ಮ ವೃತ್ತಿಜೀವನದಲ್ಲಿ ಬೆಂಬಲವಾಗಿ ನಿಂತ ಹಿರಿಯರು, ಕುಟುಂಬದವರು ಹಾಗೂ ಸಹೋದ್ಯೋಗಿಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು. ವಿದ್ಯಾರ್ಥಿಗಳ ಪೋಷಕರು ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ನೆನಪಿಸಿಕೊಂಡ ಅವರು, ಶಾಲೆಯೊಂದಿಗೆ ಬೆಸೆದುಕೊಂಡಿದ್ದ ದೀರ್ಘಕಾಲದ ಬಾಂಧವ್ಯದಿಂದ ದೂರವಾಗುವ ಕ್ಷಣವನ್ನು ಭಾವುಕರಾಗಿ ಹಂಚಿಕೊಂಡರು. ಹಿರಿಯ ವಿದ್ಯಾರ್ಥಿಗಳ ಪೋಷಕರು, ಸಹ ಅಧ್ಯಾಪಕರು ಹಾಗೂ ಶಾಲೆಯೊಂದಿಗಿನ ಆತ್ಮೀಯ ಸಂಬಂಧಗಳು ತಮ್ಮ ಶಿಕ್ಷಕ ಜೀವನದ ಅಮೂಲ್ಯ ಸಂಪತ್ತು ಎಂದು ತಿಳಿಸಿದರು. ಅವರ ಮಾತುಗಳು ಸಭಿಕರ ಮನಸ್ಸನ್ನೂ ತಟ್ಟಿದವು.
ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ರೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಹಿರಿಯರಾದ ಪದ್ಮನಾಭ ರೈ, ಸಾಮಾಜಿಕ ಕಾರ್ಯಕರ್ತ ಉಮ್ಮರ್ ಕುಂಞ ಸಾಲೆತ್ತೂರು ಹಾಗೂ ನಿವೃತ್ತ ಶಿಕ್ಷಕಿ ಪುಟ್ಟಮ್ಮ ಉಪಸ್ಥಿತರಿದ್ದರು.
ಚಂದ್ರಾವತಿ ಅವರ ವ್ಯಕ್ತಿ ಪರಿಚಯವನ್ನು ಕನ್ಯಾನ ಕ್ಲಸ್ಟರ್ ಸಿಆರ್‌ಪಿ ಚಂದ್ರಶೇಖರ್ ಕೇಪು ಮಾಡಿದರು. ಕೊಳ್ನಾಡು ಸಿಆರ್‌ಪಿ ರಮೇಶ್ ಸ್ವಾಗತಿಸಿದರು. ದ.ಕ.ಜಿ.ಪ. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಖಾ ಸಿ.ಎಚ್. ವಂದಿಸಿದರು. ಸನ್ಮಾನ ಪತ್ರವನ್ನು ಶ್ರೀಮತಿ ಯಶ್ವಿನಿ ಕುಳಾಲು ವಾಚಿಸಿದರು. ದ.ಕ.ಜಿ.ಪ. ಕಟ್ಟತ್ತಿಲ ಮಠ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಪದಕಣ್ಣಾಯ ಕಾರ್ಯಕ್ರಮ ನಿರೂಪಿಸಿದರು.
ಚಂದ್ರಾವತಿ ಅವರ ಪತಿ, ನಿವೃತ್ತ ಶಿಕ್ಷಕ ಲಕ್ಷ್ಮಣದಾಸ್ ನಾಯ್ಕ್ ಹಾಗೂ ಪುತ್ರ ತೇಜಸ್ ಎಲ್. ನಾಯ್ಕ್ ಉಪಸ್ಥಿತರಿದ್ದರು.
ಮಕ್ಕಳ ಮನಸ್ಸನ್ನು ಗೆದ್ದು, ಅವರ ಪ್ರತಿಭೆಗೆ ನೀರೆರೆದು ಬೆಳೆಸಿದ ಶಿಕ್ಷಕಿಯ ಸಾರ್ಥಕ ಸೇವೆಗೆ ಶಾಲಾ ಕುಟುಂಬ, ವಿದ್ಯಾರ್ಥಿಗಳು ಹಾಗೂ ಊರವರು ಗೌರವಪೂರ್ವಕ ವಿದಾಯ ಸಲ್ಲಿಸಿದರು.

