ಮಂಗಳೂರು: ಬಜಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನೊಬ್ಬನ ಹತ್ಯೆಗೆ ಸಂಚು ರೂಪಿಸಿದ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ, ಸೂತ್ರಧಾರರು ಹಾಗೂ ಹಣಕಾಸು ನೆರವು ನೀಡಿದವರನ್ನು ಬಂಧಿಸಬೇಕು ಎಂದು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಗ್ರಹಿಸಿದರು.

ನಗರದ ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸಂಚು ತಡೆದು ಮೂವರನ್ನು ಬಂಧಿಸಿರುವುದು ಸ್ವಾಗತಾರ್ಹವಾದರೂ, ಪ್ರಕರಣದ ಮೂಲಕ್ಕೆ ತೆರಳಿ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ರಕ್ಷಣೆ, ಸಾಕ್ಷ್ಯಗಳ ಸಂರಕ್ಷಣೆ ಹಾಗೂ ಸಂಚಿಗೆ ಬಳಸಲಾಗಿದೆ ಎನ್ನಲಾದ ಸ್ಥಳಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೊಲೆ ಸಂಚಿಗೆ ಹಣಕಾಸು ನೆರವು ನೀಡಿದವರನ್ನು ಪತ್ತೆಹಚ್ಚಿ ಹಣದ ಮೂಲದ ಕುರಿತು ತನಿಖೆ ನಡೆಸಬೇಕು. ಈ ಕುರಿತು ಅಗತ್ಯವಿದ್ದರೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರೌಡಿಶೀಟರ್ ಭರತ್ ಕುಮ್ಡೇಲ್ ಪರವಾಗಿ ನಡೆದ ಪ್ರತಿಭಟನೆ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಲು ಪೊಲೀಸರು ಅವರ ನಿವಾಸಕ್ಕೆ ತೆರಳಿದ ವಿಚಾರದಲ್ಲೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಯಾವುದೇ ದಾಕ್ಷಿಣ್ಯವಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ , ಪ್ರಮುಖರಾದ ಇಸ್ಮಾಯಿಲ್ ಉಪಸ್ಥಿತರಿದ್ದರು.

