ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026ಕ್ಕೆ ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅದ್ದೂರಿ ಚಾಲನೆ ನೀಡಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.11ರಿಂದ 22ರವರೆಗೆ ನಡೆಯಲಿರುವ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.

ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ದಸರಾ ಮಹೋತ್ಸವ ನಡೆಯಲಿದೆ. ಅ.11ರಂದು ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ.12ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಈ ಬಾರಿ ಕುದ್ರೋಳಿ ಕ್ಷೇತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಭವ್ಯ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದೆ. ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಅ.12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಆಯೋಜಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೂ ಚಂಡಿಕಾಹೋಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಶ್ರೀಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ‘ದಸರಾ ಕಲಾಝೇಂಕಾರ’ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಪ್ರತಿದಿನ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅ.12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿವೆ. ಅ.13ರಂದು ಸಂಜೆ 7.30ರಿಂದ ‘ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ಆಯೋಜಿಸಲಾಗಿದೆ.

ಅ.15ರಂದು ಮಕ್ಕಳಿಗಾಗಿ ‘ಮಕ್ಕಳ ದಸರಾ’ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. ಅ.16ರಂದು ‘ಮುದ್ದು ಶಾರದೆ’ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4 ಹಾಗೂ ‘ಕಿನ್ನಿಪಿಲಿ’ ಸೀಸನ್-2 ನಡೆಯಲಿದೆ.
ಅ.19ರಂದು ಮಹಿಳೆಯರಿಗಾಗಿ ‘ಮಹಿಳಾ ದಸರಾ’ ಆಯೋಜಿಸಲಾಗಿದೆ. ಭರತನಾಟ್ಯ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ ಹಾಗೂ ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ-ದಾಂಡಿಯಾ ನೃತ್ಯವೂ ನಡೆಯಲಿದೆ. ಅ.20ರಂದು ‘ದಸರಾ ರಂಗಾಂತರಂಗ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಅ.20ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

ಮಂಗಳೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಐತಿಹಾಸಿಕ ದಸರಾ ಶೋಭಾಯಾತ್ರೆಗೆ ಅ.21ರಂದು ಸಂಜೆ 4 ಗಂಟೆಗೆ ಚಾಲನೆ ದೊರೆಯಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆರಂಭವಾಗುವ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಲಿದೆ. ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು ಹಾಗೂ ಧಾರ್ಮಿಕ ವೈಭವವನ್ನು ಬಿಂಬಿಸುವ ಮೆರವಣಿಗೆ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.
ಈ ಬಾರಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ನವರಾತ್ರಿ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ್ ಸೋಮಸುಂದರ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ, ರಾಧಾಕೃಷ್ಣ, ಚಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Best slot experience in the PH region so far. The graphics are stunning and the payouts feel fair. You should definitely visit tayahotslot.