ಮಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು, ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಿಹೋಗುವ ಆತಂಕವಿದ್ದು, ಈ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಸಂಘಟನೆ ಆರೋಪಿಸಿದೆ. ಜನವರಿ 2025ರಲ್ಲಿ ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಿ, ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಫಾರಂ 7ರ ದುರುಪಯೋಗದ ಆರೋಪ
ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಅಧಿಕ ಹೆಸರುಗಳನ್ನು ಅಳಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಬೀದಿಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಒಂಟಿ ಮಹಿಳೆಯರು, ಎಲ್ಜಿಬಿಟಿಕ್ಯೂಐಎ ಸಮುದಾಯದವರು, ದಲಿತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ವರ್ಗಗಳ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಅಳಿಸಲಾದ ಹೆಸರುಗಳನ್ನು ಫಾರಂ 6ರ ಮೂಲಕ ಮರುಸೇರ್ಪಡೆಗೊಳಿಸುವ ಪ್ರಕ್ರಿಯೆಯೂ ಸಮರ್ಪಕವಾಗಿಲ್ಲ ಎಂದು ದೂರಲಾಗಿದೆ.

ಅರ್ಹ ಮತದಾರರ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಬಳಸುವ ಫಾರಂ 7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನೂ ಸಂಘಟನೆ ಮಾಡಿದೆ. ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತವಾಗಿ ಮತದಾರರ ಹೆಸರುಗಳನ್ನು ಅಳಿಸುವ ಸಾಧ್ಯತೆಯಿದ್ದು, ಇದನ್ನು ತಡೆಯಲು ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಫಾರಂ 6ರಲ್ಲಿ ಕಾನೂನುಬಾಹಿರ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿರುವ ಸಂಘಟನೆ, ಚುನಾವಣಾ ಆಯೋಗದ ಸ್ವಾಯತ್ತತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಅಗತ್ಯ ದಾಖಲೆಗಳ ಕೊರತೆ, ವಲಸೆ ಮತ್ತು ಹೆಸರುಗಳಲ್ಲಿನ ವ್ಯತ್ಯಾಸಗಳಿಂದಾಗಿ ಅಂಚಿನಲ್ಲಿರುವ ಸಮುದಾಯಗಳು ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪಾರದರ್ಶಕವಾಗಿ, ಕಾನೂನುಬದ್ಧವಾಗಿ ಹಾಗೂ ಸಾರ್ವಜನಿಕ ಹೊಣೆಗಾರಿಕೆಗೆ ಒಳಪಡುವ ರೀತಿಯಲ್ಲಿ ನಡೆಸಬೇಕು. ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆಯಲ್ಲಿ ದುರುಪಯೋಗ ನಡೆಯದಂತೆ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಈ ಕ್ರಮಗಳನ್ನು ಕೈಗೊಳ್ಳಲು ವಿಫಲರಾದಲ್ಲಿ ಅವರೂ ರಾಜೀನಾಮೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾಧ್ಯಕ್ಷ ಫಾ. ವಿನಯ್ ಮಸ್ಕರೇನಸ್, ಸಿಪಿಐ (ಎಂಎಲ್) ಮುಖಂಡ ರಾಮಣ್ಣ ವಿಟ್ಲ, ವೆಲ್ಫೇರ್ ಪಾರ್ಟಿಯ ಜಿಲ್ಲಾ ಮುಖಂಡರಾದ ಮುನೀರ್ ಪದ್ರೆಂಗಿ ಮತ್ತು ಮುಹಮ್ಮದ್ ಸೈಫ್, ಎಡಿಪಿಐ ಜಿಲ್ಲಾ ಮುಖಂಡ ಅನ್ವರ್ ಸಾದತ್, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನೀತು ಡಿಸೋಜ, ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಅಮೀನ್ ಅಹ್ಸನ್, ವೈಆರ್ಎ ಜಿಲ್ಲಾ ನಾಯಕ ಹಾಗೂ ನ್ಯಾಯವಾದಿ ಲುಕ್ಮಾನ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.


Really loving the vibe here. Everything feels very intuitive and the bonuses are actually helpful for new players. Highly recommend vnnohu1
I’ve been looking for a reliable place to play and this one really delivers. The interface is super smooth and the payouts are fast. Check it out at lucky97login505