ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಅ.16ರಂದು ಸಮಾಲೋಚನಾ ಸಭೆ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ನ್ಯಾಯ ದೊರೆಯುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಕುರಿತು ಅ.16ರಂದು ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಹಿರಿಯ ವಕೀಲ ಬಿ. ಇಬ್ರಾಹಿಂ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ ವತಿಯಿಂದ ಅಂದು ಸಂಜೆ 4 ಗಂಟೆಗೆ ನಗರದ ಸ್ಟೇಟ್ ಬ್ಯಾಂಕ್‌ನಲ್ಲಿರುವ ಭಾರತೀಯ ರೆಡ್ ಕ್ರಾಸ್ ಕಟ್ಟಡದಲ್ಲಿ ಸಭೆ ನಡೆಯಲಿದೆ ಎಂದರು.

ಕರಾವಳಿ ಮತ್ತು ಮಲೆನಾಡಿನ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಪ್ರಯಾಣದ ಸಮಯ, ಸಾರಿಗೆ, ವಸತಿ ಸೇರಿದಂತೆ ಹಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಇದರಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ವಕೀಲರ ಸಂಘಗಳ ಪದಾಧಿಕಾರಿಗಳು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು, ರಾಜಕೀಯ ಪಕ್ಷಗಳ ಮುಖಂಡರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿ.ಎ. ಮೊಹಮ್ಮದ್ ಹನೀಫ್, ಸರ್ಫರಾಝ್, ಅಶ್ರಫ್ ಅಗ್ನಾಡಿ, ಬಿ. ಮುಕ್ತಾರ್ ಅಹ್ಮದ್, ಜಿಶನ್ ಆಲಿ ಹಾಗೂ ಮಹಮ್ಮದ್ ಅಸ್ಗರ್ ಉಪಸ್ಥಿತರಿದ್ದರು.

SHARE
Loading spinner

One thought on “ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಅ.16ರಂದು ಸಮಾಲೋಚನಾ ಸಭೆ”

Leave a Reply

Your email address will not be published. Required fields are marked *

error: Content is protected !!