ಎಂಆರ್‌ಪಿಎಲ್ ಗುತ್ತಿಗೆ ಕಾರ್ಮಿಕರು, ಭೂನಿರ್ವಸಿತರಿಂದ ಅ.19ರಂದು ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕರು, ಭೂನಿರ್ವಸಿತರು ಹಾಗೂ ಸಂತ್ರಸ್ತರ ಹೋರಾಟ ಸಮಿತಿಯು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.19ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದೆ. ನಿಗದಿತ ಸಮಯದೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿದೆ.


ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಎಂಆರ್‌ಪಿಎಲ್ ಸ್ಥಳೀಯ ಗುತ್ತಿಗೆ ಕಾರ್ಮಿಕರ ಹೋರಾಟದ ಜತೆಗೆ ನಾಲ್ಕನೇ ಹಂತದ ಭೂನಿರ್ವಸಿತರ ಹಿತರಕ್ಷಣಾ ಸಮಿತಿ, ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು ಹಾಗೂ ಇತ್ತೀಚಿನ ಸ್ಫೋಟದಿಂದ ಸಂತ್ರಸ್ತರಾದ ಕಳವಾರು ಪ್ರದೇಶದ ನಿವಾಸಿಗಳು ಮತ್ತು ಸಾಮಾಜಿಕ ಹೋರಾಟಗಾರರು ಸೇರಿ ಈ ಸಮಿತಿಯನ್ನು ರಚಿಸಲಾಗಿದೆ ಎಂದರು.
ಎಂಆರ್‌ಪಿಎಲ್‌ನಲ್ಲಿ ದುಡಿಯುವ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸುವುದು, ವೈದ್ಯಕೀಯ ಸೌಲಭ್ಯಗಳಲ್ಲಿನ ತಾರತಮ್ಯ ನಿವಾರಿಸುವುದು ಹಾಗೂ ನಾಲ್ಕನೇ ಹಂತದ ಭೂಸ್ವಾಧೀನದ ವೇಳೆ ನೀಡಿದ್ದ ಭರವಸೆಯಂತೆ ಭೂನಿರ್ವಸಿತರಿಗೆ ಉದ್ಯೋಗ ಮತ್ತು ಇತರ ಸೌಲಭ್ಯ ಕಲ್ಪಿಸಬೇಕು. ಇತ್ತೀಚಿನ ಸ್ಫೋಟದಿಂದ ಹಾನಿಗೊಳಗಾಗಿರುವ ಕಳವಾರು ನಿವಾಸಿಗಳ ಮನೆಗಳು ಮತ್ತು ಜಮೀನುಗಳು ಎಂಆರ್‌ಪಿಎಲ್‌ನ ಮೂರನೇ ಹಂತದ ಯೋಜನೆಯ ಕಂಪೌಂಡ್ ಗೋಡೆಯ ಸಮೀಪದಲ್ಲಿರುವುದರಿಂದ ಅವರು ಜೀವಭಯದಲ್ಲಿ ಬದುಕುವಂತಾಗಿದೆ. ಹೀಗಾಗಿ, ಅವರ ಜಮೀನುಗಳನ್ನು ಸರಕಾರ ಮತ್ತು ಎಂಆರ್‌ಪಿಎಲ್ ಖರೀದಿಸಿ, ಇತರರಿಗೆ ನೀಡಿದಂತೆಯೇ ಸೂಕ್ತ ಪರಿಹಾರ ಹಾಗೂ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.


ಭೂನಿರ್ವಸಿತರಲ್ಲದ ಅರ್ಹ ಸ್ಥಳೀಯರಿಗೂ ನೇರ ಉದ್ಯೋಗದಲ್ಲಿ ಅವಕಾಶ ಕಲ್ಪಿಸಬೇಕು. ಕೈಗಾರಿಕೆಗಳಿಂದ ಉಂಟಾಗುತ್ತಿರುವ ಕೊಳಚೆ ನೀರಿನ ಸಮಸ್ಯೆ, ದುರ್ವಾಸನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆಗೆ ಅನುದಾನದ ಕೊರತೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸಾಲ್ಯಾನ್, ಎಂಆರ್‌ಪಿಎಲ್ ನಾಲ್ಕನೇ ಹಂತದ ಹೋರಾಟ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಡೋನಿ ಸುವಾರಿಸ್ ಹಾಗೂ ಬಾಳ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಶಂಕರ ಜೋಗಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!