ಕಲೆಗೆ ಧರ್ಮದ ಬೇಲಿಯಿಲ್ಲ: ಶ್ರೀದೇವಿಯಾಗಿ ಗಮನ ಸೆಳೆದ ಆರ್ಷಿಯಾ ಖಾನ್

ಮಂಗಳೂರು: ಧಾರ್ಮಿಕ ಸೌಹಾರ್ದತೆ ಮತ್ತು ಕಲಾ ಸಾಮರಸ್ಯಕ್ಕೆ ಸಾಕ್ಷಿಯಾಗಿ, ಯಕ್ಷಗಾನದ ರಂಗಸ್ಥಳದಲ್ಲಿ ಮುಸ್ಲಿಂ ಮಹಿಳೆ ಆರ್ಷಿಯಾ ಖಾನ್ ಅವರು ಶ್ರೀದೇವಿಯ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಆರ್ಷಿಯಾ ಖಾನ್, ನವರಾತ್ರಿ ಸಂಭ್ರಮದ ಅಂಗವಾಗಿ ಅಕ್ಟೋಬರ್ 20ರಂದು ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ನಡೆದ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ದೇವಿಯಾಗಿ ಕಾಣಿಸಿಕೊಂಡರು.

ಕದಳಿ ಕಲಾ ಕೇಂದ್ರದ ವತಿಯಿಂದ ಅಕ್ಟೋಬರ್ 11ರಿಂದ 20ರವರೆಗೆ ಆಯೋಜಿಸಲಾದ 14ನೇ ವರ್ಷದ ‘ಕದಳಿ ದಶಾಹ’ ಯಕ್ಷಗಾನ ಸಂಭ್ರಮದ ಕೊನೆಯ ದಿನ ಈ ಪ್ರದರ್ಶನ ನಡೆಯಿತು. ಕಟೀಲು, ಪಾವಂಜೆ ಸೇರಿದಂತೆ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳ ಕಲಾವಿದರೊಂದಿಗೆ ಆರ್ಷಿಯಾ ಖಾನ್ ರಂಗಸ್ಥಳ ಹಂಚಿಕೊಂಡರು. ಕಲೆಯ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ ಅವರ ಸಾಧನೆ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

‘ತನು ವಿಟ್ಲ’ ಎಂಬ ಹೆಸರಿನಿಂದಲೂ ಪರಿಚಿತರಾಗಿರುವ ಆರ್ಷಿಯಾ ಖಾನ್, ಕಳೆದ 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಗುರು ಕದ್ರಿ ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ತೆಂಕುತಿಟ್ಟು ಯಕ್ಷಗಾನದಲ್ಲಿ ತರಬೇತಿ ಪಡೆದಿರುವ ಅವರು, ಈ ಹಿಂದೆ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಸೇರಿದಂತೆ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾತ್ವಿಕ ಆಹಾರ ಪದ್ಧತಿ ಮತ್ತು ವ್ರತಾಚರಣೆಯ ಮೂಲಕ ಶ್ರದ್ಧೆಯಿಂದ ಸಿದ್ಧತೆ ಮಾಡಿಕೊಂಡಿದ್ದರು.

ನಿವೃತ್ತ ಉಪ ತಹಸೀಲ್ದಾರ್ ಅಬ್ದುಲ್ ಖಾದರ್ ಮತ್ತು ಮುಮ್ತಾಜ್ ದಂಪತಿಯ ಪುತ್ರಿಯಾದ ಆರ್ಷಿಯಾ, ತಮ್ಮ ಒಂಬತ್ತನೇ ವಯಸ್ಸಿನಲ್ಲಿ, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಯಕ್ಷಗಾನ ಕಲಿಯಲು ಆರಂಭಿಸಿದ್ದರು. ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಹಾಗೂ ಚಂಡೆಯ ನಾದ ಅವರಲ್ಲಿ ಕಲಾಸಕ್ತಿಯನ್ನು ಮೂಡಿಸಿದ್ದವು. ಪೋಷಕರ ಪ್ರೋತ್ಸಾಹದಿಂದ ಕಲಾಪಯಣ ಆರಂಭಿಸಿದ ಅವರು, ಇಂದು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಜಾತಿ, ಧರ್ಮಗಳ ಗಡಿಯನ್ನು ಮೀರಿ ಜನರನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ. ಬಪ್ಪನಾಡು ಕ್ಷೇತ್ರದ ಮಹಾತ್ಮೆಯೂ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ನಿದರ್ಶನವಾಗಿದೆ. ಇಂತಹ ಸಾಂಸ್ಕೃತಿಕ ನೆಲೆಯಲ್ಲಿ ಆರ್ಷಿಯಾ ಖಾನ್ ಅವರು ಶ್ರೀದೇವಿಯ ಪಾತ್ರ ನಿರ್ವಹಿಸಿರುವುದು ಕಲೆಗೆ ಧರ್ಮದ ಗಡಿಯಿಲ್ಲ ಎಂಬ ಸಂದೇಶವನ್ನು ಸಾರಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!