ಶ್ರೀದೇವಿ ನೃತ್ಯ ಕೇಂದ್ರದ ಸುವರ್ಣ ಮಹೋತ್ಸವ: ಅ. 25ರಂದು ವಾರ್ಷಿಕ ನೃತ್ಯೋತ್ಸವ

ಕುಮಾರಿ ವೈಗಾ ಅವರ ರಂಗಪ್ರವೇಶ, ಮಿನಾಲ್ ಪ್ರಭು ಅವರಿಗೆ ಜಯಕಲಾ ಪ್ರಶಸ್ತಿ ಪ್ರದಾನ

ಮಂಗಳೂರು: ಶ್ರೀದೇವಿ ನೃತ್ಯ ಕೇಂದ್ರದ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಅಕ್ಟೋಬರ್ 25ರಂದು ವಾರ್ಷಿಕ ನೃತ್ಯೋತ್ಸವ-2026 ನಡೆಯಲಿದೆ. ಮಂಗಳೂರಿನ ಡೊಂಗರಕೇರಿಯ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಮಾರಿ ವೈಗಾ ಅವರ ಭರತನಾಟ್ಯ ರಂಗಪ್ರವೇಶ ಪ್ರಮುಖ ಆಕರ್ಷಣೆಯಾಗಿರಲಿದೆ.

ಈ ಸಂದರ್ಭದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ದಿವಂಗತ ಜಯಲಕ್ಷ್ಮಿ ಆಳ್ವ ಅವರ ಸ್ಮರಣಾರ್ಥ ಸ್ಥಾಪಿಸಿರುವ ‘ಜಯಕಲಾ ಪ್ರಶಸ್ತಿ’ಯನ್ನು ಮುದ್ರಿಕ ಫೌಂಡೇಶನ್ ಫಾರ್ ಇಂಡಿಯನ್ ಪರ್ಫಾರ್ಮಿಂಗ್ ಆರ್ಟ್ಸ್‌ನ ಸ್ಥಾಪಕಿ, ಕರ್ನಾಟಕ ಕಲಾಶ್ರೀ ಪುರಸ್ಕೃತೆ ಮಿನಾಲ್ ಪ್ರಭು ಅವರಿಗೆ ಪ್ರದಾನ ಮಾಡಲಾಗುವುದು. ಕಟೀಲು ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಅವರ ಆಶೀರ್ವಾದದೊಂದಿಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಾಜಿ ಜೋಸ್ ವಹಿಸಲಿದ್ದು, ಹರಿಕೃಷ್ಣ ಪುನರೂರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸಮಾರೋಪ ಸಮಾರಂಭವು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪದ್ಮಶ್ರೀ ಕಲಾಮಂದಿರ, ಹೊಸೂರು ಇಲ್ಲಿನ ವಿದ್ಯಾರ್ಥಿಗಳಿಂದ ‘ಶಕ್ತಿ ನೃತ್ಯಂ’ ಹಾಗೂ ಶ್ರೀದೇವಿ ನೃತ್ಯ ಕೇಂದ್ರದ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ‘ಭರತನಾಟ್ಯ ಮಾರ್ಗ’ ಪ್ರದರ್ಶನಗೊಳ್ಳಲಿದೆ.

ಶಾಸ್ತ್ರೀಯ ನೃತ್ಯಕಲೆಯ ಬೆಳವಣಿಗೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಆಯೋಜಿಸಿರುವ ಈ ನೃತ್ಯೋತ್ಸವಕ್ಕೆ ಸಾರ್ವಜನಿಕರು ಮತ್ತು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಸಂಘಟಕರು ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!