
ಮಂಗಳೂರು: ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್ನಲ್ಲಿ ಅಕ್ಟೋಬರ್ 25ರಂದು ಭಾನುವಾರ ಮತ್ಸ್ಯಮೇಳ ಹಾಗೂ ಮೀನು ಖಾದ್ಯಗಳ ಆಹಾರೋತ್ಸವ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಕೆ.ಜಿ.ಗೆ ₹160ರಂತೆ ಮೀನು ಮಾರಾಟ ಮಾಡಲಾಗುವುದು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲಿ ಪಿಲಿಕುಳ ನಿಸರ್ಗಧಾಮ ಆರಂಭವಾದ ಬಳಿಕ ಐದು ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿವರ್ಷ ಕೆರೆಗೆ ಮೀನಿನ ಮರಿಗಳನ್ನು ಬಿಟ್ಟು, ಬೆಳೆದ ಮೀನುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಕರಾವಳಿಯ ಮೀನುಗಾರಿಕೆ ಪರಂಪರೆಯನ್ನು ಪರಿಚಯಿಸಲಾಗುತ್ತಿದೆ ಎಂದರು.

ಈ ಬಾರಿ ಕೆರೆಯಲ್ಲಿ ಬೆಳೆದ ಮೀನುಗಳನ್ನು ಹಿಡಿದು ಮಾರಾಟ ಮಾಡುವುದರ ಜತೆಗೆ ವಿವಿಧ ಮೀನು ಖಾದ್ಯಗಳನ್ನು ಸವಿಯಲು ಆಹಾರೋತ್ಸವವನ್ನೂ ಆಯೋಜಿಸಲಾಗಿದೆ. ಮಂಗಳೂರಿನ ಕೆಲವು ಪ್ರಮುಖ ಹೋಟೆಲ್ಗಳು ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್ಡಿಸಿ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಿಗಮದ ಮೊಬೈಲ್ ಕ್ಯಾಂಟೀನ್ ಮೂಲಕವೂ ಆಹಾರ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರತಿವರ್ಷ ಕೆರೆಗೆ ಕಾಟ್ಲಾ, ತಿಲಾಪಿಯಾ ಹಾಗೂ ರೋಹು ಜಾತಿಯ ಸುಮಾರು 20 ಸಾವಿರ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ಸಾಮಾನ್ಯವಾಗಿ ಜುಲೈನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಕಾರಣಾಂತರಗಳಿಂದ ಅಕ್ಟೋಬರ್ನಲ್ಲಿ ಆಯೋಜಿಸಲಾಗಿದೆ. ಹಿಂದಿನ ವರ್ಷ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಈ ಬಾರಿ ಸುಮಾರು 1,000ರಿಂದ 1,500 ಕೆ.ಜಿ. ಮೀನು ಲಭ್ಯವಾಗುವ ನಿರೀಕ್ಷೆಯಿದೆ ಎಂದರು.

ಮೀನುಗಳನ್ನು ಹಿಂದಿನ ದಿನವೇ ಬಲೆ ಹಾಕಿ ಹಿಡಿದು ಸಿದ್ಧಪಡಿಸಲಾಗುತ್ತದೆ. ಅಕ್ಟೋಬರ್ 25ರಂದು ಬೆಳಿಗ್ಗೆ 8.30ರಿಂದ ಸಾರ್ವಜನಿಕರಿಗೆ ಮೀನು ಮಾರಾಟ ಆರಂಭವಾಗಲಿದೆ. ಜೀವಂತ ಮೀನುಗಳನ್ನೇ ಹೆಚ್ಚಾಗಿ ಮಾರಾಟ ಮಾಡಲಾಗುವುದು. ಇದು ಲಾಭದ ಉದ್ದೇಶದ ಕಾರ್ಯಕ್ರಮವಲ್ಲ; ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಕನಿಷ್ಠ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖರಾದ ರಾಮಕೃಷ್ಣ ಮರಾಠಿ ಹಾಗೂ ಡಾ. ನಿತಿನ್ ಉಪಸ್ಥಿತರಿದ್ದರು.

