ಶಾಂತಿ ಗುಡ್ಡೆಯ 105 ಕುಟುಂಬಗಳ ಸ್ಥಳಾಂತರಕ್ಕೆ ಆಗ್ರಹ

ಮಂಗಳೂರು: ಬಜ್ಪೆ ಸಮೀಪದ ಶಾಂತಿ ಗುಡ್ಡೆಯಲ್ಲಿ ಎಂಆರ್‌ಪಿಎಲ್ ಕಂಪೌಂಡ್‌ಗೆ ಹೊಂದಿಕೊಂಡಿರುವ 105 ಬಡ ಕುಟುಂಬಗಳ ಮನೆಗಳನ್ನು ಬಫರ್ ಝೋನ್ ವ್ಯಾಪ್ತಿಗೆ ಸೇರಿಸಿ, ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿ ಗುಡ್ಡೆಯಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ 105 ಕುಟುಂಬಗಳು ವಾಸಿಸುತ್ತಿವೆ. ಸುಮಾರು 50 ವರ್ಷಗಳ ಹಿಂದೆ ಸರ್ಕಾರ ನೀಡಿದ ತಲಾ ಎರಡೂವರೆ ಸೆಂಟ್ಸ್ ಜಾಗದಲ್ಲಿ ಈ ಕುಟುಂಬಗಳು ಮನೆ ನಿರ್ಮಿಸಿಕೊಂಡಿವೆ. ಎಂಆರ್‌ಪಿಎಲ್ ಸ್ಥಾಪನೆಯಾದ ಬಳಿಕ ಅದರ ಕಂಪೌಂಡ್ ಗೋಡೆ ಈ ಮನೆಗಳಿಗೆ ಹೊಂದಿಕೊಂಡಿದ್ದು, ಸ್ಥಳೀಯರು ಕಳೆದ 20 ವರ್ಷಗಳಿಂದ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕೈಗಾರಿಕಾ ಘಟಕಗಳಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಆತಂಕವಿದೆ. ಚರ್ಮರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ನಿವಾಸಿಗಳು ದೂರುತ್ತಿದ್ದಾರೆ. ಕೈಗಾರಿಕಾ ಘಟಕಗಳ ಸುತ್ತ ಅಗತ್ಯ ಬಫರ್ ಝೋನ್ ಕಲ್ಪಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರ ಜೀವ ಮತ್ತು ಆರೋಗ್ಯದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

2007ರಲ್ಲೇ ಈ 105 ಮನೆಗಳನ್ನು ತೆರವುಗೊಳಿಸುವ ಸಂಬಂಧ ನೋಟಿಸ್ ಹಾಗೂ ಅಧಿಸೂಚನೆ ಹೊರಡಿಸಲಾಗಿತ್ತು ಎನ್ನಲಾಗಿದೆ. ಆದರೂ ಹಲವು ವರ್ಷಗಳ ಹೋರಾಟದ ಬಳಿಕವೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಮತ್ತೊಂದೆಡೆ, ಜೋಕಟ್ಟೆ ಪರಿಸರದಲ್ಲಿ ಬಫರ್ ಝೋನ್‌ಗಾಗಿ 27 ಎಕರೆ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಶಾಂತಿ ಗುಡ್ಡೆಯ ನಾಲ್ಕು ಎಕರೆ ಪ್ರದೇಶವನ್ನೂ ಸೇರಿಸಿ ಒಟ್ಟು 31 ಎಕರೆ ಭೂಮಿಯನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿಯವರನ್ನು ಈಗಾಗಲೇ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಶಾಂತಿ ಗುಡ್ಡೆಯ ನಿವಾಸಿಗಳ ಸಮಸ್ಯೆ ಮೊದಲು ಪರಿಹಾರವಾಗಬೇಕಿತ್ತು ಎಂಬ ಅಭಿಪ್ರಾಯವನ್ನು ಜಿಲ್ಲಾಧಿಕಾರಿಯವರು ವ್ಯಕ್ತಪಡಿಸಿದ್ದರು ಎಂದು ಸಿರಾಜ್ ಬಜ್ಪೆ ತಿಳಿಸಿದರು. ಪತ್ರಿಕಾಗೋಷ್ಠಿಯ ಬಳಿಕ ಮತ್ತೊಮ್ಮೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಬಳಿಕ ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಇಸ್ಮಾಯಿಲ್ ಇಂಜಿನಿಯರ್, ನಿಸಾರ್ ಕರಾವಳಿ, ವಸಂತ್, ಕೃಷ್ಣರಾಜ್, ರಫೀಕ್ ಹಾಗೂ ಶಿಶಿರ್ ಕುಮಾರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!