
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಹಾಗೂ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆಯ ಸೂಚನೆಯಂತೆ ಸುರಿದ ಮಳೆಯ ಅಬ್ಬರಕ್ಕೆ ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಮೂಡುಬಿದಿರೆ ಹಾಗೂ ಕಡಬ ತಾಲೂಕಿನ ವಿವಿಧೆಡೆ ವ್ಯಾಪಕ ಮಳೆಯಾಗಿದೆ. ಪರಿಣಾಮ ಜಿಲ್ಲೆಯ ಹಲವು ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಬೆದ್ರೋಡಿಯಿಂದ ಕಾಂಚನ ಕ್ರಾಸ್ವರೆಗಿನ ಹೆದ್ದಾರಿಯ ಹಲವು ಕಡೆಗಳಲ್ಲಿ ಮಳೆನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತೊಂದರೆ ಉಂಟುಮಾಡಿತು. ಇನ್ನು ಹೆದ್ದಾರಿ ಬದಿಯ ಚರಂಡಿಗಳು ತುಂಬಿ ಹರಿದ ಪರಿಣಾಮ ನೀರು ರಸ್ತೆಯ ಮೇಲೆ ಹರಿಯಿತು.

ಇದರಿಂದ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು. ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

