
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ವ್ಯಾಪ್ತಿಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ಅನಧಿಕೃತ ವಿನ್ಯಾಸಗಳ ಸಕ್ರಮೀಕರಣಕ್ಕೆ ಸಂಬಂಧಿಸಿದ ಶುಲ್ಕವನ್ನು ಶೇ.15ರಿಂದ ಶೇ.1ಕ್ಕೆ ಇಳಿಸಲಾಗಿದೆ ಎಂದು ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಮೂಡಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಯೋಜನೆ ವ್ಯಾಪ್ತಿಯಲ್ಲಿ ನೇರ ವಿನ್ಯಾಸ ಹಾಗೂ ಏಕ ನಿವೇಶನ ಅನುಮೋದನೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿವೇಶನ ಖರೀದಿ, ಬಡಾವಣೆ ಅಭಿವೃದ್ಧಿ ಮತ್ತು ಮನೆ ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ವಿಳಂಬ, ಅನಗತ್ಯ ಅಲೆದಾಟ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದರು.

ಕುಂಜತ್ತಬೈಲ್ನಲ್ಲಿ 208 ನಿವೇಶನಗಳ ಅಭಿವೃದ್ಧಿ
ಮಂಗಳೂರಿನ ಕುಂಜತ್ತಬೈಲ್ನಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ 208 ನಿವೇಶನಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಈ ಪೈಕಿ 38 ನಿವೇಶನಗಳು ಈಗಾಗಲೇ ಮಾರಾಟವಾಗಿದ್ದು, ಉಳಿದ ನಿವೇಶನಗಳಿಗೆ ನಿಗದಿತ ಶೇ.10ರಷ್ಟು ಮೊತ್ತ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಚೇಳಾರು ಗ್ರಾಮದಲ್ಲಿ ಸುಮಾರು 45 ಎಕರೆ ಪ್ರದೇಶದಲ್ಲಿ ಹಾಗೂ ಸಂಜಯನಗರದಲ್ಲಿ ವಸತಿ ಬಡಾವಣೆ ಅಭಿವೃದ್ಧಿಪಡಿಸುವ ಯೋಜನೆಗಳೂ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

9 ಕೆರೆಗಳ ಅಭಿವೃದ್ಧಿಗೆ ₹18 ಕೋಟಿ
ನಗರದ ಒಂಬತ್ತು ಕೆರೆಗಳನ್ನು ಸುಮಾರು ₹18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಉಳ್ಳಾಲದಲ್ಲಿಯೂ ಕೆರೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಉದ್ದೇಶವಿದೆ. ಮಂಗಳೂರಿನಲ್ಲಿ ಉದ್ಯಾನವನಗಳ ಕೊರತೆ ನೀಗಿಸಲು ಮಹಾನಗರ ಪಾಲಿಕೆ ಹಾಗೂ ಮೂಡಾ ಅಧಿಕಾರಿಗಳ ಸಹಯೋಗದಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಲಾಗುತ್ತಿದೆ ಎಂದರು.
ಕೊಟ್ಟಾರ ಚೌಕಿ-ಲೇಡಿಹಿಲ್ ಸ್ಮಾರ್ಟ್ ರಸ್ತೆ
ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಮೂಲಕ ಲೇಡಿಹಿಲ್ವರೆಗೆ ಸುಮಾರು ₹5 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪಾದಚಾರಿ ಮಾರ್ಗ, ರಸ್ತೆ ಸೌಂದರ್ಯೀಕರಣ ಹಾಗೂ ಸಸ್ಯಗಳ ನೆಡುವಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಉರ್ವಸ್ಟೋರ್ ಮಾರುಕಟ್ಟೆ ಆಧುನೀಕರಣ
ಉರ್ವಸ್ಟೋರ್ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಸುಮಾರು 22 ಸಾವಿರ ಚದರ ಅಡಿ ವಿಸ್ತೀರ್ಣದ ಮಾರುಕಟ್ಟೆ ಕಟ್ಟಡದಲ್ಲಿ ನೆಲಮಾಳಿಗೆಯ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು. ಯೋಜನೆಗೆ ₹8ರಿಂದ ₹9 ಕೋಟಿ ವೆಚ್ಚವಾಗುವ ಅಂದಾಜಿದೆ. ತರಕಾರಿ, ಮೀನು ಮತ್ತು ಮಾಂಸದ ಮಳಿಗೆಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಮಾರುಕಟ್ಟೆಯ ಪಕ್ಕದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವ ಮೂಲಕ ಆದಾಯ ಗಳಿಸುವ ಉದ್ದೇಶವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಡಾ ಆಯುಕ್ತ ಮೊಹಮ್ಮದ್ ನಝೀರ್, ಸದಸ್ಯರಾದ ಸುಮನ್ ದಾಸ್, ಸವಿತಾ ಮಿಸ್ಕಿತ್, ನೀರಜ್ ಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

