ರಾಜಕೇಸರಿ ಸಂಸ್ಥೆಯ ಆಸರೆ ಯೋಜನೆ: ನ.15ರಂದು 35ನೇ ಮನೆ ನಿರ್ಮಾಣಕ್ಕೆ ಭೂಮಿಪೂಜೆ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಹಾಗೂ ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜಕೇಸರಿ ಸೇವಾ ಟ್ರಸ್ಟ್ (ರಿ.) ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ‘ಆಸರೆ’ ಯೋಜನೆಯಡಿ 35ನೇ ಮನೆಯ ನಿರ್ಮಾಣಕ್ಕೆ ನವೆಂಬರ್ 15ರಂದು ಬೆಳಿಗ್ಗೆ 11 ಗಂಟೆಗೆ ಉಜಿರೆ ಗ್ರಾಮದ ಪೆರ್ಲದಲ್ಲಿ ಭೂಮಿಪೂಜೆ ನಡೆಯಲಿದೆ.

ಧರ್ಮಸ್ಥಳ ಸಮೀಪದ ದೊಂಡೆಲಿ ನಿವಾಸಿ ಶ್ರೀಮತಿ ರತ್ನ ಅವರ ಕುಟುಂಬಕ್ಕೆ ಈ ಮನೆ ನಿರ್ಮಿಸಿಕೊಡಲಾಗುತ್ತಿದೆ. ಪತಿಯನ್ನು ಕಳೆದುಕೊಂಡಿರುವ ರತ್ನ ಅವರು ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಮನೆಗೆ ತೆರಳಿ ಮನೆಗೆಲಸ ಹಾಗೂ ಹೋಟೆಲ್‌ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನೂ ಒಬ್ಬರೇ ಹೊತ್ತಿರುವ ಅವರಿಗೆ ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ.

ಈ ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ವಸತಿ ಸಮಸ್ಯೆಯನ್ನು ಮನಗಂಡ ರಾಜಕೇಸರಿ ಸಂಸ್ಥೆಯು ಆಸರೆ ಯೋಜನೆಯಡಿ ಸಹೃದಯೀ ದಾನಿಗಳ ಅಮೂಲ್ಯ ಸಹಾಯ ಹಸ್ತದೊಂದಿಗೆ ನೂತನ ಮನೆ ನಿರ್ಮಿಸಿಕೊಡಲು ಮುಂದಾಗಿದೆ.

ಕಳೆದ 14 ವರ್ಷಗಳಿಂದ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಈಗಾಗಲೇ 34 ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದೆ. ಒಟ್ಟು 594 ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಎರಡು ಕೋಟಿಗೂ ಅಧಿಕ ಮೌಲ್ಯದ ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಸಂಸ್ಥೆಯ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ಮಾರ್ಗದರ್ಶನದಲ್ಲಿ ಈ ಸೇವಾ ಕಾರ್ಯಗಳು ಮುಂದುವರಿಯುತ್ತಿದ್ದು, ಇದೀಗ 35ನೇ ಮನೆಯ ನಿರ್ಮಾಣದ ಮೂಲಕ ಮತ್ತೊಂದು ಅಶಕ್ತ ಕುಟುಂಬಕ್ಕೆ ಆಸರೆಯಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!