ಪುತ್ತೂರು: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಮಾಜದ ನಾನಾ ವರ್ಗದ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ಈಗ, ನೀಟ್ ಅಕ್ರಮಗಳನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದೌರ್ಜನ್ಯ ಎಸಗಲಾಗಿದೆ ಎಂದು ದಕ್ಷಿöಣ ಕನ್ನಡ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಹೇಳಿದರು.

ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಮೂಹದ ಮೇಲೆ ನಡೆದ ದೌರ್ಜನ್ಯ ಮತ್ತು ಪ್ರತಿಭಟನೆ ನಡೆಸಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಂಧನ, ದಬ್ಬಾಳಿಕೆ ವಿರೋಧಿಸಿ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯ ಎದುರು ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನೇ ಜೋಪಾನ ಮಾಡದ ಸರಕಾರ ಈ ದೇಶವನ್ನು ಹೇಗ ಜೋಪಾನ ಮಾಡಬಲ್ಲುದು ಎಂದು ಪ್ರಶ್ನಿಸಿದ ಅವರು, ಮಹಾತ್ಮಾ ಗಾಂಧಿಯವರ ಹೆಸರನ್ನೇ ಇಲ್ಲವಾಗಿಸಲು ಯತ್ನಿಸಿದವರು ಈಗ ನ್ಯಾಯ ಬೇಡಲು ಬಂದವರ ಮೇಲೆಯೇ ದಬ್ಬಾಳಿಕೆ ಮಾಡಿದ್ದಾರೆ ಎಂದರು.

ಪುತ್ತೂರು ಕಾಂಗ್ರೆಸ್ ಉಸ್ತುವಾರಿ ಚಿತ್ತರಂಜನ್ ಶೆಟ್ಟಿ ಮಾತನಾಡಿ, ನೀಟ್ ಅಕ್ರಮದಿಂದ ನೊಂದು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವ ಸಮುದಾಯದ ಬದುಕಿನ ಜತೆ ಮೋದಿ ಸರಕಾರ ಚೆಲ್ಲಾಟವಾಡುತ್ತಿದೆ. ಲಾಠಿ ಚಾಜ್೯ ನಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಪ್ರತೀ ಹನಿ ರಕ್ತಕ್ಕೂ ಮೋದಿ ಸರಕಾರ ಬೆಲೆ ಕೊಡುವ ದಿನ ಬರಲಿದೆ. ವಿದ್ಯಾರ್ಥಿ ಶಕ್ತಿಯನ್ನು ಎದುರು ಹಾಕಿಕೊಂಡ ಯಾವ ಸರಕಾರವೂ ಇದುವರೆಗೆ ಉಳಿದಿಲ್ಲ. ಮೋದಿ ಸರಕಾರಕ್ಕೂ ಇದೇ ಸ್ಥಿತಿ ಬರಲಿದೆ ಎಂದರು.

ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಮಾತನಾಡಿ, ನೀಟ್ ಪರೀಕ್ಷೆಯ ಅಕ್ರಮದಿಂದ 23 ಲಕ್ಷ ಕುಟುಂಬಗಳಿಗೆ ಸಮಸ್ಯೆಯಾಗಿದೆ. 21 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವತಂತ್ರ ಭಾರತದಲ್ಲೇ ಅತ್ಯಂತ ಕ್ರೂರಿ, ಸರ್ವಾಧಿಕಾರಿ ಸರಕಾರ ಇದ್ದರೆ ಅದು ಮೋದಿ ಸರಕಾರ ಮಾತ್ರ. ಈಗ ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ಪಾಕ್ ಕೈವಾಡ ಇದೆ ಎನ್ನುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ ಎಂದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಐದು ವರ್ಷಗಳಿಂದ ಸೋರಿಕೆಯಾಗುತ್ತಿದೆ. ಅಯೋಧ್ಯೆಯ ಮಂದಿರದಿಂದ ಸಾವಿರಾರು ಕೋಟಿ ನುಂಗಿದವರನ್ನು ಬಚಾವ್ ಮಾಡುತ್ತಿರುವ ಮೋದಿ, ನೀಟ್ ಅಕ್ಷಮ್ಯಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಡವರ ಮಕ್ಕಳೂ ವೈದ್ಯರಾಗಬೇಕೆಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರಕಾರ ನೀಟ್ ಪರೀಕ್ಷೆ ಜಾರಿಗೆ ತಂದಿದ್ದರೆ, ಇದನ್ನು ಮೋದಿ ಸರಕಾರ ಬುಡಮೇಲು ಮಾಡುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ, ದಿಲ್ಲಿಯ ನಡೆದ ಪ್ರತಿಭಟನೆ ಸಂದರ್ಭ ಆರೆಸ್ಸೆಸ್ ಗೂಂಡಾಗಳು ಪೊಲೀಸರ ಜತೆ ಸೇರಿ ವಿದ್ಯಾರ್ಥಿಗಳು ಮತ್ತು ರಾಹುಲ್ ಗಾಂಧಿ ಮೇಲೆ ದಾಳಿ ಮಾಡಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿ ಮೋದಿ ಅವರಿಗೆ ಮುಖ್ಯವಾಗಿಲ್ಲ ಎಂದರು. ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಚಿನ್ನಾಭರಣ ಲೂಟಿ ಮಾಡಿದ ಎಡ ಪಕ್ಷಗಳ ಸರಕಾರ ಚುನಾವಣೆಯಲ್ಲಿ ಪರಾಜಯಗೊಂಡಿದೆ. ಈಗ ಕೇಂದ್ರದ ಮೋದಿ ಸರಕಾರದಡಿಯಲ್ಲಿ ಅಯೋಧ್ಯೆಯ ರಾಮ ದೇವರ ಹುಂಡಿಯನ್ನೇ ಕಳವು ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ರಾಮನ ಶಾಪ ಬಿಜೆಪಿಗೆ ತಟ್ಟಲಿದೆ ಎಂದರು.

ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವಾ,ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಕೆ.ಬಿ. ರಾಜಾರಾಂ,ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಹಮ್ಮದ್ ಬಡಗನ್ನೂರು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ,ಪಕ್ಷದ ಮುಖಂಡರಾದ ಅಮಳ ರಾಮಚಂದ್ರ, ಜೋಕಿಂ ಡಿಸೋಜ, ಪ್ರಸಾದ್ ಕೌಶಲ್ ಶೆಟ್ಟಿ, ಉಮಾನಾಥ ಶೆಟ್ಟಿ ಪೆರ್ನೆ, ಯು.ಟಿ. ತೌಸಿಫ್, ಪ್ರವೀಣ್ ಆಳ್ವ, ಅಮರನಾಥ ಗೌಡ ಬಪ್ಪಳಿಗೆ, ವಲೇರಿಯನ್ ಡಯಾಸ್, ಎಂ.ಬಿ. ವಿಶ್ವನಾಥ ರೈ, ರಾಮಣ್ಣ ಪಿಲಿಂಜ, ರಮಾನಾಥ ವಿಟ್ಲ , ಚಂದ್ರಕಲಾ ಮುಕ್ವೆ, ಅನ್ವರ್ ಖಾಸಿಂ ಮತ್ತಿತರರು ಉಪಸ್ಥಿತರಿದ್ದರು.


