ಮಂಗಳೂರು:ಶ್ರೀ ನಾರಾಯಣ ಗುರು-ಗಾಂಧೀಜಿ ಸಂವಾದ ಶತಮಾನೋತ್ಸವದ ಪ್ರಯುಕ್ತ ಶಿವಗಿರಿ ಮಠ, ವರ್ಕಲ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಶ್ರೀ ಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು ಎಂದರು.ಶಿವಗಿರಿ ಮಠದಿಂದ ಮನವಿ ಮಾಡಿದಂತೆ ಐದು ಎಕರೆ ಭೂಮಿಗೆ ಬಿ.ಕೆ.ಹರಿಪ್ರಸಾದ್ ಮತ್ತು ಇತರ ನಾಯಕರು ಭೂಮಿ ಗುರುತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಬಗ್ಗೆ ಪ್ರಧಾನ ಸಂದೇಶ ಭಾಷಣ ಮಾಡಿದ ಲೋಕಸಭೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಕೆ. ಸಿ. ವೇಣುಗೋಪಾಲ್, ಬಸವಣ್ಣ, ಮಹಾತ್ಮ ಗಾಂಧಿ, ನಾರಾಯಣ ಗುರು ತತ್ವಗಳು ದೇಶದ ಸಂವಿಧಾನದಲ್ಲಿ ಅಡಕವಾಗಿವೆ. ಇಂಥ ಮಹಾನ್ ಸಂವಿಧಾನವೇ ಈಗ ಬೆದರಿಕೆ ಎದುರಿಸುತ್ತಿದೆ. ಗಾಂಧಿ, ಗುರುಗಳು ದಶಕಗಳ ಹಿಂದೆ ಎದುರಿಸಿದ ಬೆದರಿಕೆಯಂತೆಯೇ ಸಂವಿಧಾನ ಬೆದರಿಕೆ ಎದುರಿಸುತ್ತಿರುವುದು ದುರದೃಷ್ಟ. ಈ ಮಹಾನ್ ನಾಯಕರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಮುಂದುವರಿಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಇತಿಹಾಸವನ್ನು ಭವಿಷ್ಯಕ್ಕೆ ತಿಳಿಸುವ ಈ ಕಾರ್ಯಕ್ರಮ ನಡೆದ ಈ ಮೈದಾನಕ್ಕೆ ಗುರು-ಗಾಂಧಿ ಮೈದಾನ ಎಂದು ನಾಮಕರಣಗೊಳಿಸಿ ಪಾರ್ಕ್, ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿದರು.
ಶಿವಗಿರಿ ಮಠದ ಕಾರ್ಯದರ್ಶಿ ಶುಭಗಾನಂದ ಸ್ವಾಮೀಜಿ, ಗೃಹಸಚಿವ ಡಾ.ಜಿ.ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್, ಮಾಜಿ ಸಚಿವ ಜನಾರ್ದನ ಪೂಜಾರಿ. ಶಾಸಕರಾದ ಅಶೋಕ್ ರೈ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕಾಂಗ್ರೆಸ್ ನಾಯಕರಾದ ಹರೀಶ್ ಕುಮಾರ್, ಪಿವಿ ಮೋಹನ್, ಎಂ.ಎ.ಗಫೂರ್, ಪದ್ಮರಾಜ್, ರಕ್ಷಿತ್ ಶಿವರಾಂ, ಪ್ರತಿಭಾ ಕುಳಾಯಿ, ವಿಶ್ವಾಸ್ ಕುಮಾರ್ ದಾಸ್, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ ಸ್ವಾಗತಿಸಿದರು.