ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ತಿರುವು ಕಂಡುಬಂದಿದ್ದು, DMK ನೇತೃತ್ವದ ಮೈತ್ರಿಗೆ ಭಾರೀ ಶಾಕ್ ಉಂಟಾಗಿದೆ. Indian National Congress ತನ್ನ ಹಳೆಯ ಮೈತ್ರಿಯನ್ನು ತೊರೆದು Tamilaga Vettri Kazhagam ಕಡೆ ಮುಖ ಮಾಡಿದ್ದು, ಹೊಸ ಮೈತ್ರಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ.
ಚುನಾವಣಾ ಫಲಿತಾಂಶಗಳ ಬಳಿಕ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿದ್ದವು.
ಈ ನಡುವೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಮುಂದಾಗಿದ್ದು, ಮೈತ್ರಿ ಸರ್ಕಾರದ ಘೋಷಣೆಯೊಂದಿಗೆ ವಿವಿಧ ಪಕ್ಷಗಳ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಸ್ಪಂದಿಸಿರುವ ಕಾಂಗ್ರೆಸ್, ತನ್ನ ಬೆಂಬಲ ನೀಡಲು ಮುಂದಾಗಿರುವುದು ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಿಸಿದೆ.
ಕಾಂಗ್ರೆಸ್ ಮತ್ತು ಟಿವಿಕೆ ನಡುವಿನ ಮಾತುಕತೆಗಳಲ್ಲಿ ಸಂಪುಟ ಸ್ಥಾನ ಹಂಚಿಕೆ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿದ್ದು, ಕಾಂಗ್ರೆಸ್‌ಗೆ ಸರ್ಕಾರದಲ್ಲಿ ಪ್ರಮುಖ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ನಿರ್ಧಾರಕ್ಕೂ ಮುನ್ನ ನಡೆದ ತುರ್ತು ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕೇಂದ್ರ ನಾಯಕತ್ವದ ಸೂಚನೆಗಳ ಮೇರೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.
ತಡರಾತ್ರಿ 10.30ಕ್ಕೆ ನಡೆದ ತಮಿಳುನಾಡು ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯ ತುರ್ತು ಸಭೆಯಲ್ಲಿ ಟಿವಿಕೆಗೆ ಬೆಂಬಲ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಗಿರೀಶ್ ಚೋಡಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆ ವರ್ಚುವಲ್ ಮೂಲಕ ಆಯೋಜಿಸಲಾಗಿತ್ತು.
ವಿಜಯ್ ಅವರ ಬೆಂಬಲ ಕೋರಿಕೆಯ ಕುರಿತು ರಾಜ್ಯ ಘಟಕಕ್ಕೆ ನಿರ್ಧಾರ ಕೈಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದ ಹಿನ್ನೆಲೆ, ತಡರಾತ್ರಿ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿ ಅಧಿಕಾರ ಕಳೆದುಕೊಂಡ ಕೇವಲ ಒಂದು ದಿನದೊಳಗೆ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿರುವುದು ಡಿಎಂಕೆಗೆ ಭಾರೀ ರಾಜಕೀಯ ಹೊಡೆತವಾಗಿದೆ.