ತಿರುವನಂತಪುರಂ: ಕೇರಳದ ನೆಡುಮಂಗಾಡ್ನಲ್ಲಿ ಒಂದೂವರೆ ವರ್ಷದ ಕಂದಮ್ಮನ ಸಾವಿನ ಪ್ರಕರಣ ಬೆಚ್ಚಿಬೀಳಿಸುವ ತಿರುವು ಪಡೆದಿದ್ದು, ಮಗುವಿನ ತಾಯಿ ಅಖಿಲಾ ಹಾಗೂ ಆಕೆಯ ಲಿವ್-ಇನ್ ಸಂಗಾತಿ ಅಷ್ಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 29ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದ್ದು, ಮಗುವಿನ ದೇಹದ ಮೇಲೆ 51ಕ್ಕೂ ಹೆಚ್ಚು ಗಾಯಗಳ ಗುರುತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಹಳೆಯ ಮೂಳೆ ಮುರಿತಗಳು, ಸುಟ್ಟ ಗಾಯಗಳು ಹಾಗೂ ಆಂತರಿಕ ರಕ್ತಸ್ರಾವದ ಲಕ್ಷಣಗಳೂ ವರದಿಯಲ್ಲಿ ಉಲ್ಲೇಖವಾಗಿವೆ ಎನ್ನಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಘಟನೆಯ ದಿನ ಆರೋಪಿ ಅಷ್ಕರ್ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಗುವಿಗೆ ಈ ಹಿಂದೆಯೂ ಗಾಯಗಳಾಗಿದ್ದರೂ ತಾಯಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಆಕೆಯನ್ನೂ ಸಹ-ಆರೋಪಿಯಾಗಿ ಬಂಧಿಸಲಾಗಿದೆ.
ಮಗುವಿನ ಅಜ್ಜ-ಅಜ್ಜಿ ಈ ಹಿಂದೆ ಮಗುವಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಕ್ಕಳ ರಕ್ಷಣಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.