ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ.
2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಕಳೆದ ಎರಡು ಅವಧಿಯಲ್ಲಿ ನಿರಂತರವಾಗಿ ಆಡಳಿತ ನಡೆಸಿದ ಸರಕಾರವು ಮುಂದಿನ ಚುನಾವಣೆಯ್ಲಲೂ ಗೆಲುವಿನ ನಗೆ ಬೀರುವ ಕನಸಿಗೆ ಈ ಸವಾಲುಗಳು ಮಾರಕವಾಗಿ ಪರಿಣಮಿಸಿದರೆ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ನಿಲಂಬೂರು ಉಪಚುನಾವಣೆಯ ಜಿದ್ದಾ ಜಿದ್ದಿನ ಸ್ಪರ್ಧೆಯಲ್ಲಿ ಎಡರಂಗ ಅಭ್ಯರ್ಥಿ ಹೀನಾಯವಾಗಿ ಪರಾಭವಗೊಂಡಿದ್ದು ಆಡಳಿತ ಪಕ್ಷಕ್ಕೆ ಬಹುದೊಡ್ಡ ಹೊಡೆತವಾಗಿತ್ತು. ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸೆಗೆ ಬೇಕಾದ ಸರಿಯಾದ ಉಪಕರಣಗಳ ಅಲಭ್ಯತೆ ಮತ್ತು ಸಾಕಷ್ಟು ಸಿಬ್ಬಂದಿಗಳ ಕೊರತೆ ಇತ್ಯಾದಿ ಅವ್ಯವಸ್ಥೆಯ ಬಗ್ಗೆ ಸರ್ಜನ್ ಡಾ: ಹ್ಯಾರಿಸ್ ಚರೇಕಲ್ ಬಹಿರಂಗವಾಗಿ ಹೇಳಿಕೆ ನೀಡಿ ಸರಕಾರಕ್ಕೆ ತೀವ್ರ ಮುಜುಗರ ವಾಗಿತ್ತು. ಡಾ: ಹ್ಯಾರಿಸ್ ರವರ ಬಹಿರಂಗ ಹೇಳಿಕೆಯ ನಂತರ ಸರಕಾರವು ಹೊರರಾಜ್ಯಗಳಿಂದ ಶಸ್ತ್ರ ಚಿಕಿತ್ಸೆಗೆ ಬೇಕಾದ ಉಪಕರಣಗಳನ್ನು ತರಿಸಿ ಮೆಡಿಕಲ್ ಕಾಲೇಜಿನ ಅವ್ಯವಸ್ಥೆಗೆ ತೇಪೆ ಹಚ್ಚುವ ಕೆಲಸ ಮಾಡಿತ್ತು.
ರಾಜ್ಯ ಭವನದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾರತಮಾತೆಯ ಭಾವಚಿತ್ರ ವನ್ನಿಟ್ಟ ವಿವಾದ ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದವಾಗಿ ರಾಜ್ಯಪಾಲರಿಗೆ ಮತ್ತು ಸರಕಾರಕ್ಕೆ ನಡುವೆ ಶೀತಲ ಸಮರಕ್ಕೆ ನಾಂದಿಯಾಡಿತು. ವಿಚಾರ ಈಗಲೂ ಬೂದಿಮುಚ್ಚಿದ ಕೆಂಡದಂತೆ ಇದೆ,
ವಿಶ್ವ ವಿದ್ಯಾನಿಲಯದಲ್ಲಿ ಉಂಟಾದ ಕೆಲವು ವಿವಾದಗಳು ಭಾರೀ ಸುದ್ದಿಯಾಗಿ ರಾಜ್ಯ ರಾಜಕೀಯದಲ್ಲಿ ವನ್ನು ತಲ್ಲಣಗೊಳಿಸಿತು. ಕೋಟಯಂ ಮೆಡಿಕಲ್ ಕಾಲೇಜಿನಲ್ಲಿ ಉಂಟಾದ ಭಾರೀ ಅನಾಹುತದಿಂದ ಜೀವ ಹಾನಿಯೂ ನಡೆದಿತ್ತು. ಈ ಪ್ರಕರಣದಿಂದ ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ,ಬಿಜೆಪಿ ,ಯುವಮೋರ್ಚಾ ಮತ್ತು ಯೂತ್ ಕಾಂಗ್ರೆಸ್ ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡಿ ಅದು ಹಿಂಸಾ ರೂಪ ಪಡೆದಿತ್ತು.
ರಾಜ್ಯಾದ್ಯಂತ ಆಶಾ ಕಾರ್ಯಕರ್ತರ ರಾಜ್ಯ ವ್ಯಾಪ್ತಿ ಮುಷ್ಕರ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ವಿರೋಧ ಪಕ್ಷಗಳ ಪ್ರತಿಭಟನೆ ಇದೆಲ್ಲವೂ ಆಡಳಿತ ಪಕ್ಷವನ್ನು ನಿದ್ದೆಗೆಡಿಸಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ
ನೂತನವಾಗಿ ಜಾರಿಗೆ ತಂದ ಜುಂಬಾ ನೃತ್ಯದ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೂ , ಸರಕಾರವು ಈ ಬಗ್ಗೆ ಅಚಲವಾಗಿದ್ದುದು ಕೆಲವು ಧರ್ಮ ಪಂಡಿತರು ಜುಂಬಾ ನೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದರೂ ಸರಕಾರ ಇದಕ್ಕೆ ಕ್ಯಾರೇ ಅನ್ನಲಿಲ್ಲ . ಶಾಲಾ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ,ಗಾಂಜಾದಂತಹ ಅಮಲು ಪದಾರ್ಥಗಳನ್ನು ವಿದ್ಯಾರ್ಥಿಗಳು ಬಳಸುತ್ತಿರುವುದು ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಕೊಲ್ಲಂ ನ ತೆವಲಕ್ಕರ ಶಾಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಮಿಥುನ್ ಸಾವನ್ನಪ್ಪಿದ್ದು , ಕೇರಳ ವಿದ್ಯುತ್ ಇಲಾಖೆಯ ನಿರ್ಲಕ್ಷಕ್ಕೆ ರಾಜ್ಯಾದ್ಯಂತ ಮತ್ತೊಮ್ಮೆ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಈ ರೀತಿಯಾಗಿ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು ಮತ್ತು ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ ಇತ್ಯಾದಿಗಳು ರಾಜ್ಯ ಸರಕಾರವನ್ನು ನಿದ್ದೆಗೆಡಿಸಿದೆ. ಈ ರೀತಿಯಾಗಿ ಒಂದೊಂದೇ ಘಟನೆಗಳು ನಡೆಯುತ್ತಿರುವುದು ಹಾಗೂ ಸರಕಾರದ ಕೆಲವು ಇಲಾಖೆಗಳ ನಿರ್ಲಕ್ಷಗಳ ಅನಾವರಣವಾಗುತ್ತಿರುವುದು ಸರಕಾರಕ್ಕೆ ಇರಿಸು ಮುರಿಸು ಉಂಟುಮಾಡುತ್ತಿದೆ. ಪ್ರತಿ ಇಲಾಖೆಯಲ್ಲಿ ನಡೆಯುವ ಈ ನಿರ್ಲಕ್ಷದ ಧೋರಣೆಯು ವಿರೋಧ ಪಕ್ಷಗಳಿಗೆ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ಪ್ರೇರಣೆ ನೀಡುತ್ತದೆ.
ಅಂತೂ ಇಂತೂ ಸ್ಥಳೀಯಾಡಳಿತ ಚುನಾವಣೆಯ ಹಾಗೂ ವಿಧಾನ ಸಭಾ ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯ ಸರಕಾರವು ಈ ಸವಾಲುಗಳನ್ನು ಹೇಗೆ ಎದುರಿಸುತ್ತಿದೆ ಮತ್ತು ವಿರೋಧ ಪಕ್ಷಗಳು ಎಷ್ಟರ ಮಟ್ಟಿಗೆ ಯಶಸ್ವೀ ಯಾಗುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ.