ಕುಟ್ಟಿ ತೆಯ್ಯಂ-ಆದಿ ಮತ್ತು ವೇಡನ್ ತೆಯ್ಯಂ

ಆಟಿ ಮಾಸವನ್ನು ‘ಕರ್ಕಟಕ’ ಮಾಸವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಉತ್ತರ ಮಲಬಾರ್ ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಕಾಸರಗೋಡು ಮತ್ತು ಕಣ್ಣೂರ್ ಈ ಭಾಗದಲ್ಲಿ ದೈವಾರಾಧನೆಗಳು ದೇವಾಲಯಗಳಲ್ಲಿ ನಡೆಯುವುದು ಬಹುತೇಕ ವಿರಳವಾಗಿರುತ್ತದೆ. ಶೂನ್ಯ ಮಾಸದಲ್ಲಿ ಕೋಲಗಳನ್ನು ಕಟ್ಟಿ ಆಡಿಸುವ ಸಂಪ್ರದಾಯ ತುಂಬಾ ಕಡಿಮೆ. ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ ಮುಂದಿನ ತುಲಾ ಹತ್ತು ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವೈಶಿಷ್ಟವಾದ ದೈವರಾಧನೆಗಳು ನಡೆಯುತ್ತದೆ. ಆದರೆ ಇದು ವಯಸ್ಕರ ಕಟ್ಟಿ ಆಡುವ ದೈವಗಳು ಇದಾಗಿರದೆ ಬಾಲಕರು ಕಟ್ಟುವ ದೈವವಾಗಿರುತ್ತದೆ.

ಆದಿ ಮತ್ತು ವೇಡನ್ ತೆಯ್ಯಂ ಕರ್ಕಾಟಕ ಮಾಸದ ಕುಟ್ಟಿ ತೆಯ್ಯಂ ಆಗಿದೆ . ಕುಟ್ಟಿ ತೆಯ್ಯಂ ಎಂದರೆ ಬಾಲಕ ದೈವವೆಂದು ಅರ್ಥವಿದೆ. ಇದನ್ನು ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟ 16 ವರ್ಷ ಒಳಗಿನ ಮಕ್ಕಳು ಕಟ್ಟುವ ದೈವವಾಗಿದೆ.

ಅಲಂಕೃತವಾದ ಕೆಂಪು ವೇಷಭೂಷಣಗಳ ಅಲಂಕಾರ, ಮುಗ್ಧ ಮುಖಗಳಿಗೆ ಕೇಸರಿ ಬಣ್ಣದ ಮುಖ ವರ್ಣಿಕೆ, ಕೈಗೊಂದು ಕಿಣಿಕಿಣಿ ಗಂಟೆ, ಕಾಲಿಗೆ ಗೆಜ್ಜೆಯ ಕಟ್ಟಿ ಚಂಡೆಯ ಸದ್ದಿಗೆ ಪಾಡ್ದನಗಳ ಹಾಡಿಗೆ ಹೆಜ್ಜೆ ಹಾಕಿ ಉತ್ತರ ಮಲಬಾರಿನ ಹಚ್ಚಹಸುರಿನ ಹೊಲಗಳನ್ನು ದಾಟುತ್ತಾ ಮನೆಮನೆಗಳಿಗೆ ಬರುತ್ತಾರೆ. ಆದಿ ಮತ್ತು ವೇಡನ್ ತೆಯ್ಯಂಗಳು ಮಳೆಗಾಲದ ರೋಗ ರುಚಿನಗಳನ್ನು ನಿವಾರಿಸಲು ಬರುತ್ತದೆ ಎಂಬ ವಾಡಿಕೆ. ಈ ದೈವಗಳ ಜೊತೆಗೆ ಕಾಸರಗೋಡಿನ ಕೆಲವು ಭಾಗಗಳಲ್ಲಿ ಕಳಂಜ ಕೂಡ ಬರುತ್ತದೆ.

ಆದಿ ಮತ್ತು ವೇಡನ್ 2 ಭಿನ್ನವಾದ ದೈವವಾಗಿದೆ. ವೇಡನ್ ಶಿವನಾದರೆ ಆದಿ ಅವನ ಪತ್ನಿ ಪಾರ್ವತಿ ದೇವಿ ಆಗಿರುತ್ತದೆ, ಹಾಗೇ ಕಳಂಜ ಅರ್ಜುನನಾಗಿರುತ್ತಾನೆ. ಈ ಆದಿ ಮತ್ತು ವೇಡನ್ ತೆಯ್ಯಂ ಕಥೆಯು ಮಹಾಭಾರತವಾಗಿ ಬಂಧವನ್ನು ಪಡೆದುಕೊಂಡಿದೆ. ಮಹಾಭಾರತದ ‘ವನಪರ್ವ’ ದಲ್ಲಿ ತಿಳಿಸುವಂತೆ

  

ಒಮ್ಮೆ ಅರ್ಜುನನ್ನು ಕಠಿಣ ತಪಸ್ಸನ್ನು ಮಾಡುತ್ತಾ ಇರುತ್ತಾನೆ. ಅರ್ಜುನನನ್ನು ಪರೀಕ್ಷಿಸಲು ಶಿವ ಮತ್ತು ಪಾರ್ವತಿ ದೇವಿಯು ಕಾಡುಕೋಣವಾಗಿ ಮಾರ್ಪಟ್ಟು ಅರ್ಜುನನ ತಪಸ್ಸಿನ ಸ್ಥಳಕ್ಕೆ ಬರುತ್ತಾರೆ. ಈ ಕ್ಷಣದಲ್ಲಿ ಮೂಕನೆಂಬ ರಾಕ್ಷಸನು ಕಾಡು ಹಂದಿಯ ವೇಷವನ್ನು ಧರಿಸಿ ಅರ್ಜುನನ ಧ್ಯಾನವನ್ನು ಕೆಡಿಸಲು ಮುಂದಾಗುತ್ತಾನೆ. ಆ ಕ್ಷಣದಲ್ಲಿ ಅರ್ಜುನನು ಧ್ಯಾನದಿಂದ ಎದ್ದನು. ಇತ್ತ ಶಿವನು ಬೇಡರೂಪದಾರಿಯಾಗಿ ಕಾಡು ಹಂದಿಯ ಮೇಲೆ ಬಾಣವನ್ನು ಪ್ರಯೋಗಿಸಿದ ಆ ಸಮಯದಲ್ಲೇ ಅರ್ಜುನನು ಕೂಡ ಬಾಣವನ್ನು ಪ್ರಯೋಗಿಸಿದ್ದ. ಇದೇ ಸಮಯ ಅರ್ಜುನ ಮತ್ತು ಬೇಡನ ನಡುವೆ ವಾಕ್ ಸಮರವೇ ನಡೆಯುತ್ತದೆ. ಅರ್ಜುನನು ತನ್ನ ಬಾಣದಿಂದ ಹಂದಿಯು ಮೃತಪಟ್ಟಿತೆಂದು ಹೇಳಿದರೆ ಇತ್ತ ಬೇಡನು ನನ್ನಿಂದ ಎನ್ನುತ್ತಾನೆ. ಹೀಗಿರುವಾಗ ಅಲ್ಲೇ ಇದ್ದ ಶಿವಮೂರ್ತಿಗೆ ಅಡಿಗೆರೆದ ಅರ್ಜುನನಿಗೆ ಸತ್ಯದರ್ಶನವಾಗುತ್ತದೆ. ಹಾಗೇ ಕಣ್ಣನ್ನು ಮುಚ್ಚಿದ ಬೇಡರೂಪದಾರಿಯಾಗಿ ಬಂದವನು ಸಾಕ್ಷಾತ್ ಪರಮ ಶಿವನೇ ಆಗಿದ್ದಾನೆ. ಕಾಡು ಕೋಣದ ರೂಪದಲ್ಲಿ ದಂಪತಿಗಳು ಬಂದದ್ದು,ಹಂದಿಯನ್ನು ಕೊಂದದ್ದು ತಿಳಿಯುತ್ತದೆ.ಹಾಗೆ ಶಿವ ನಿಜ ರೂಪ ದಾರಿಯಾಗಿ ‘ಪಾಶು ಪಥಾಸ್ತಮ್ ‘ ಎಂಬ ಬಾಣವನ್ನು ವರದ ರೂಪದಲ್ಲಿ ನೀಡುತ್ತಾನೆ.

ಆದಿ ಮತ್ತು ವೇಡನ್ ತೆಯ್ಯಂ 2 ವಿಭಿನ್ನ ಸಮುದಾಯದವರು ಕಟ್ಟುತ್ತಾರೆ. ವನ್ನಾಣ್ ಸಮುದಾಯದ ಮಕ್ಕಳು ಆದಿಯಾಗಿಯೂ, ಮಲಯ ಸಮುದಾಯದ ಮಕ್ಕಳು ಬೇಡನಾಗಿಯು ದೈವವನ್ನು ಕಟ್ಟುತ್ತಾರೆ. ಕರ್ಕಟಕ ಮಾಸದ 7ನೇ ತಾರೀಖಿನಿಂದ ಗ್ರಾಮಗಳನ್ನು ಸಂಚರಿಸುವರು ಈ ಮಾಸ ಮುಗಿಯುವ ತನಕ. ಈ ದೈವವು ಸಿಂಹ ಮಾಸದಲ್ಲಿ ಬರುವ ಓಣಂ ಹಬ್ಬವು ಶುಭದಾಯಕವಾಗಲೆಂದು ಹರಸುತ್ತದೆ. ಈ ದೈವಗಳಿಗೆ ಮನೆಯಲ್ಲಿ ಬೆಳೆದ ತರಕಾರಿ, ಧನ ಧಾನ್ಯವ ಸಲ್ಪ ನೀಡಿ,ಒಂದಿಷ್ಟು ಆಚಾರ ಕ್ರಮಗಳನ್ನು ಮಾಡಬೇಕಾಗುತ್ತದೆ. ಆ ದೈವದ ಪಾಡ್ದನದಲ್ಲಿ ಮನೆಗೆ ಬಂದಿರುವ ಮಾರಿ ಹೊಗಲಿ ಅರ್ಥಾತ್ ಸಾಂಕ್ರಾಮಿಕ ರೋಗ ಬರದಿರಲಿ ಬಂದರೆ ನಿವಾರಣೆಯಾಗಲಿ ಎಂದಿರುತ್ತದೆ.

ಲೇಖನೆ : ಗಿರೀಶ್ ಪಿಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!