ತಲಪಾಡಿಯಲ್ಲಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಕೇಸು ದಾಖಲಾದ ಬಳಿಕ ಪ್ರಯಾಣಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಮನೋವ್ಯಥೆಯಿಂದ ಬಸ್‌ಗೆ ಕಲ್ಲೆಸೆದು ಪೊಲೀಸರು ಕೇಸು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪ್ರಯಾಣಿಕನಾದ ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಎಂಬಾತನು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಬಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್ ಕಲ್ಲೆಸೆದಿದ್ದು, ಬಸ್‌ನ ಹಿಂಭಾಗದ ಗಾಜು ಹಾನಿಗೊಳಗಾಗಿದೆ.

ಘಟನೆ ಬಳಿಕ ಬಸ್ಸನ್ನು ತಕ್ಷಣ ನಿಲ್ಲಿಸಿದ ಚಾಲಕ ಹಾಗೂ ನಿರ್ವಾಹಕರು ಕಲ್ಲೆಸೆದ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅಬ್ದುಲ್ ಹಮೀದ್ ಅವರನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ತನಿಖೆಯ ವೇಳೆ ಘಟನೆ ನಡೆದ ಸ್ಥಳವು ಗಡಿ ಪ್ರದೇಶವಾದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಜೇಶ್ವರ ಠಾಣೆಯ ಪೊಲೀಸರು ಅಬ್ದುಲ್ ಹಮೀದ್ ಅವರಿಗೆ ಉಳ್ಳಾಲ ಠಾಣೆಗೆ ತೆರಳಿ ಮುಂದಿನ ಕ್ರಮಕ್ಕೆ ಹಾಜರಾಗುವಂತೆ ಸೂಚಿಸಿದ್ದು, ಇದರಂತೆ ಉಳ್ಳಾಲ ಠಾಣೆಗೆ ತೆರಳಿದ ಅಬ್ದುಲ್ ಹಮೀದ್ ಜಾಮೀನಿನಲ್ಲಿ ಹೊರಬಂದು ನೇರವಾಗಿ ತಮ್ಮ ಮನೆಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ಮಾಹಿತಿ ದೊರಕಿದ ಕೂಡಲೇ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಘಟನೆ ಗಡಿ ಪ್ರದೇಶಗಳಲ್ಲಿ ಪೊಲೀಸ್ ವ್ಯಾಪ್ತಿ ಹಾಗೂ ಸಾರಿಗೆ ವ್ಯವಸ್ಥೆ ಸಂಬಂಧಿತ ಗೊಂದಲಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!