ಮಂಜೇಶ್ವರ: ಅರಿಕ್ಕಾಡಿ ಟೋಲ್ ಸಂಗ್ರಹ ಕೇಂದ್ರದ ಮುಂಬಾಗದಲ್ಲಿ ಅನಿರ್ಧಿಷ್ಟಾವಧಿ ಕಾಲ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಶಾಸಕ ಎಕೆಎಂ ಅಶ್ರಫ್ ಸಹಿತ ಟೋಲ್ ವಿರೋಧಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ನಾಯಕರನ್ನು ಪೊಲೀಸರು ಗುರುವಾರ ಬೆಳಿಗ್ಗೆ ಬಂಧಿಸಿ ಎ ಆರ್ ಕ್ಯಾಂಪ್ ಗೆ ಕೊಂಡೊಯ್ದರು. ಶಾಸಕರನ್ನು ಹೊರತು ಪಡಿಸಿ ಉಳಿದ ನೇತಾರರನ್ನು ಕುಂಬಳೆ ಠಾಣೆಗೆ ಕೊಂಡೊಯ್ಯಲಾಗಿದೆ.

ಬುಧವಾರ ರಾತ್ರಿ ಟೋಲ್ ಸಂಗ್ರಹ ಕೇಂದ್ರಕ್ಕೆ ನಾಗರಿಕರಿಂದ ಆಕ್ರಮಣ ನಡೆದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸ್ಥಗಿತಗೊಂಡಿದ್ದು, ಗುರುವಾರ ಬೆಳಿಗ್ಗೆ ಪುನರಾರಂಭಗೊಂಡಿತ್ತು. ಇಲ್ಲಿ ಸತ್ಯಾಗ್ರಹ ನಿರತರಾಗಿದ್ದ ಶಾಸಕರು ಮತ್ತು ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಡಿವೈಎಸ್ಪಿ ನೇತೃತ್ವದಲ್ಲಿ ಬಂಧಿಸಲಾಯಿತು.

ಸತ್ಯಾಗ್ರಹದ ಮರೆಯಲ್ಲಿ ರಾತ್ರಿವೇಳೆ ಸಂಘರ್ಷ ಸೃಷ್ಟಿಯಾಗುತ್ತಿದೆ. ಇದರಿಂದ ಮತೀಯ ಗಲಭೆ ಸಹಿತ ಹಿಂಸೆ ಉಂಟಾಗಲು ಸಾಧ್ಯತೆ ಇದೆ. ಈ ಕಾರಣಗಳನ್ನು ಮುಂದಿಟ್ಟು ಸತ್ಯಾಗ್ರಹ ಕೊನೆಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಟರು ಶಾಸಕರಿಗೆ ಬುಧವಾರ ರಾತ್ರಿಯೇ ನೊಟೀಸು ನೀಡಿದ್ದರು. ಇದರಂತೆ ಇಂದು ಬೆಳಿಗ್ಗೆ ಶಾಸಕರನ್ನು ಬಂಧಿಸಲಾಗಿದ್ದು, ಸತ್ಯಾಗ್ರಹ ಕೊನೆಗೊಳಿಸಿರುವುದಾಗಿ ತಿಳಿದು ಬಂದಿದೆ.ರಾಷ್ಟ್ರೀಯ ಹೆದ್ದಾರಿಯ ಕುಂಭಳೆ ಟೋಲ್ ಪ್ಲಾಜಾ ವಿರುದ್ಧದ ಪ್ರಕರಣ ಹೈಕೋರ್ಟ್ ಪರಿಗಣನೆಯಲ್ಲಿದ್ದು, ಜನವರಿ 18ರೊಳಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ದೆಹಲಿಯಿಂದ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ಕೊಚ್ಚಿಗೆ ಆಗಮಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದೂ ಟೋಲ್ ಶುಲ್ಕ ಸಂಗ್ರಹ ನಡೆಯುತ್ತಿಲ್ಲ.

