ಕಾಸರಗೋಡು: ದೇಶದ ಎಲ್ಲಾ ಸಾಮಾನ್ಯ ಜನರನ್ನು ಕೇಂದ್ರ ಸರ್ಕಾರದ ಯೋಜನೆಗಳ ಲಾಭಾಂಶದಾರರನ್ನಾಗಿಸುವ ಉದ್ದೇಶದಿಂದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮುನ್ನಡೆದುಕೊಳ್ಳಬೇಕು ಹಾಗೂ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು ಎಂದು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯ ಹರಿದಾಸ್ ಹೇಳಿದರು. ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಮಹಿಳಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗಳಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಸ್ಥಾನಗಳನ್ನು ನೀಡುವ ಪಕ್ಷ ಬಿಜೆಪಿ ಎಂದು ಅವರು ಹೇಳಿದರು. ಮಹಿಳಾ ಸಬಲೀಕರಣವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಜಾರಿಗೆ ತಂದಿರುವ ಪಕ್ಷವೇ ಬಿಜೆಪಿ ಎಂದು ನವ್ಯ ಹರಿದಾಸ್ ತಿಳಿಸಿದರು. ಕೇರಳಾದ್ಯಂತ ಬಿಜೆಪಿ ಮತ್ತಷ್ಟು ಬಲಶಾಲಿಯಾಗುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿಟ್ಟಿರುವ ಮಿಷನ್ 2026 ಸಾಧಿಸಲು ಮಹಿಳಾ ಕಾರ್ಯಕರ್ತರು ಸಂಪೂರ್ಣ ಕಾಲಿಕ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಮಹಿಳಾ ಅಭ್ಯರ್ಥಿಗಳನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ಶಾಲು ಹೊದಿಸಿ ಗೌರವಿಸಿದರು.ಕಾರ್ಯಕ್ರಮಕ್ಕೆ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಮೀಳ ಮಜಲ್, ಅಶ್ವಿನಿ ಕೆ.ಎಂ., ಜಿಲ್ಲಾ ಖಜಾಂಚಿ ವೀಣಾ ಅರುಣ್ ಶೆಟ್ಟಿ, ಬಿಜೆಪಿ ಉದಮ ಮಂಡಲ ಅಧ್ಯಕ್ಷೆ ಶೈನಿಮೋಳ್, ಬಿಜೆಪಿ ಕಾಸರಗೋಡು ಮಂಡಲ ಉಪಾಧ್ಯಕ್ಷೆ ಲೀಲಾವತಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯಕ್, ಪ್ರೇಮಲತಾ, ಜಿಲ್ಲಾ ಮಹಿಳಾ ಮೋರ್ಚಾ ಖಜಾಂಚಿ ಶ್ರೀಲತಾ ಸೇರಿದಂತೆ ಹಲವರು ಮಾತನಾಡಿದರು.