ಮಂಜೇಶ್ವರ : 1998 ರಲ್ಲಿ ಉದ್ಯಾವರ ಸಾವಿರ ಜಮಾಹತಿನ ಅಧೀನದಲ್ಲಿ ಆರಂಭಗೊಂಡು ಗಡಿ ಪ್ರದೇಶದ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಎಲ್ಲರ ಗಮನ ಸೆಳೆದಿರುವ ಉದ್ಯಾವರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಎಲ್ಲಾ ವರ್ಷಕ್ಕಿಂತಲೂ ಭಿನ್ನವಾಗಿ ಈ ವರ್ಷ ಕೂಡಾ ಕೂಡಾ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಿತು. ವಿದ್ಯೆ, ಶಿಸ್ತು, ಸೃಜನಶೀಲತೆ ಹಾಗೂ ವಿದ್ಯಾರ್ಥಿ-ಶಿಕ್ಷಕರ ಸಮಗ್ರ ಬೆಳವಣಿಗೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಕಾರ್ಯಕ್ರಮ ಜರುಗಿತು. ಶಾಲೆಯ ಶೈಕ್ಷಣಿಕ ಗುಣಮಟ್ಟ, ಸಂಸ್ಕೃತಿಯ ಪರಂಪರೆ ಮತ್ತು ವಿದ್ಯಾರ್ಥಿಗಳ ಪ್ರತಿಭಾವಿಕಾಸಕ್ಕೆ ನೀಡುತ್ತಿರುವ ಮಹತ್ವವನ್ನು ಈ ಆಚರಣೆ ಮತ್ತೊಮ್ಮೆ ಸಾಕ್ಷಿಯಾಯಿತು.
ಸಹಶಿಕ್ಷಣ ನೀಡುವ ರಾಜ್ಯ ಪಠ್ಯಕ್ರಮದ ಶಾಲೆಯಾದ ಅಲ್ ಸಖಾಫ್ ಶಾಲೆ ಲೋಯರ್ ಕಿಂಡರ್‌ಗಾರ್ಟನ್‌ನಿಂದ ದಶಮ ತರಗತಿಯವರೆಗೆ ಸಮಗ್ರ ಶಿಕ್ಷಣವನ್ನು ಒದಗಿಸುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ದೃಢವಾದ ಶೈಕ್ಷಣಿಕ ನೆಲೆಯನ್ನು ನಿರ್ಮಿಸುವ ಜೊತೆಗೆ, ಶಿಸ್ತು, ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಶಿಕ್ಷಣವನ್ನು ಕೇವಲ ಜ್ಞಾನ ಸಂಪಾದನೆಯಾಗಿ ಮಾತ್ರವಲ್ಲದೆ, ಜವಾಬ್ದಾರಿಯುತ, ಆತ್ಮವಿಶ್ವಾಸಿ ಮತ್ತು ಸಮಾಜಮುಖಿ ನಾಗರಿಕರನ್ನು ರೂಪಿಸುವ ಪ್ರಕ್ರಿಯೆಯಾಗಿ ಪರಿಗಣಿಸಲಾಗುತ್ತದೆ.
ಉತ್ಸಾಹ ಮತ್ತು ಸಂಭ್ರಮದ ವಾತಾವರಣದಲ್ಲಿ ಕಾರ್ಯಕ್ರಮ ಆರಂಭಗೊಂಡಿದ್ದು, ಮುಖ್ಯ ಅತಿಥಿಗಳ ಆಗಮನದಿಂದ ವೇದಿಕೆ ವಿಶೇಷ ಮೆರಗನ್ನು ಪಡೆದುಕೊಂಡಿತು. ಪ್ರಾರ್ಥನೆಯ ಶಾಂತಸ್ವರ ಮತ್ತು ಸ್ವಾಗತ ನೃತ್ಯದ ಲಾಲಿತ್ಯದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರಖರವಾಗಿ ಮೂಡಿಬಂತು. ಮುಖ್ಯ ಅತಿಥಿಗಳ ಹೃದಯಸ್ಪರ್ಶಿ ಮಾತುಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಗುರಿಯ ಬೆಳಕನ್ನು ಹಚ್ಚಿದವು. ಶೈಕ್ಷಣಿಕ ಸಾಧನೆಯಲ್ಲಿ ಕಂಡುಬಂದ ಸ್ಪಷ್ಟ ಪ್ರಗತಿ ಹಾಗೂ ಕ್ರೀಡಾ–ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಸಾಧನೆಗಳು ಪೋಷಕರು ಮತ್ತು ಸಭಿಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾದವು. ಕಾರ್ಯಕ್ರಮವು ಶಾಲೆಯ ಸಾಧನಾಮಾರ್ಗದ ಭರವಸೆಯ ಸಾಕ್ಷಿಯಾಗಿ ನೆನಪಿನಲ್ಲಿ ಉಳಿಯಿತು.
ಸಯ್ಯದ್ ಸೈಫುಲ್ಲಾ ತಂಘಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವನ್ನು ಶಾಲಾ ಚೇಯರ್ಮ್ಯಾನ್ ಸಯ್ಯದ್ ಅತ್ತಾವುಲ್ಲ ತಂಘಲ್ ಉದ್ವಾಟಿಸಿದರು.ಬಳಿಕ ಮಾತನಾಡಿದ ಅವರು ( Byt 1) : ಇಲ್ಲಿ ಶಿಕ್ಷಣವು ಪಾಠಪುಸ್ತಕಗಳಿಗಷ್ಟೇ ಸೀಮಿತವಲ್ಲ; ಅದು ಜೀವನವನ್ನು ರೂಪಿಸುವ ಶಕ್ತಿ. ಈ ಶಾಲೆಯ ವಾರ್ಷಿಕೋತ್ಸವವು ಆ ಶಕ್ತಿಯ ಸಂಭ್ರಮವಾಗಿದೆ. ಎಂದು ಹೇಳಿದರು
ಬಳಿಕ ಅಧ್ಯಕ್ಷತೆ ವಹಿಸಿದ ಸಯ್ಯದ್ ಸೈಫುಲ್ಲಾ ತಂಘಲ್ ಮಾತನಾಡಿ (byt 2): ಈ ಶಾಲೆಯಲ್ಲಿ ಇವತ್ತು ಲೋಕಾರ್ಪಣೆಗೊಂಡ ಕಿಂಡರ್‌ಗಾರ್ಡನ್‌ನಿಂದ ಹೊರಬರುವ ಪುಟ್ಟ ಹೆಜ್ಜೆಗಳು ನಾಳೆಯ ಸಮಾಜಕ್ಕೆ ದಿಕ್ಕು ತೋರಿಸುವ ಮಹತ್ತರ ಹೆಜ್ಜೆಗಳಾಗಲಿವೆ ಎಂದು ಹೇಳಿ ಆಗಮಿಸಿದವರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮಿಸ್ಬಾ. ಎ ರವರು ಮಾತನಾಡಿ (Byt 3) : ನಮ್ಮ ಶಾಲೆ ಪಾಠಶಾಲೆಯಷ್ಟೇ ಅಲ್ಲ, ಅದು ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯಾಗಾರವಾಗಿದೆ. ಶೈಕ್ಷಣಿಕ ಸಾಧನೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಮೌಲ್ಯಾಧಾರಿತ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಮಕ್ಕಳ ಪ್ರತಿಭೆ ಬಹುಮುಖವಾಗಿ ಬೆಳೆಯುತ್ತಿದೆ. ಈ ಎಲ್ಲಾ ಚಟುವಟಿಕೆಗಳ ಹಿಂದೆ ನಿಂತಿರುವ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಮರ್ಪಣೆಯೇ ನಮ್ಮ ಶಾಲೆಯ ನಿಜವಾದ ಶಕ್ತಿ. ಎಂದು ಹೇಳಿದರು
ಈ ಸಂದರ್ಭ ಜಮಾಹತ್ ಉಪಾಧ್ಯಕ್ಷ ಅತ್ತಾವುಲ್ಲ ತಂಘಲ್, ಕೋಶಾಧಿಕಾರಿ ಆಹ್ಮದ್ ಭಾವ , ಪಿ ಟಿ ಎ ಅಧ್ಯಕ್ಷ ಮುಸ್ತಫ ಉದ್ಯಾವರ, ಶಫೀನಾ, ಅನ್ಸಾರ್ ತಂಘಲ್, ಇಕ್ಬಾಲ್ ಮೊಹಮ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.ಈ ಸಂದರ್ಭ ಕಡಿಮೆ ವೆಚ್ಚದಲ್ಲಿ ಪುಟ್ಟ ಮಕ್ಕಳಿಗೆ ಸುರಕ್ಷಿತ, ಆರೈಕೆಯುತ ಹಾಗೂ ಪ್ರೇರಣಾದಾಯಕ ಪ್ರಾರಂಭಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸಜ್ಜೀ ಕರಿಸಲಾದ “ಲಿಟಲ್ ಜಹ್ರಾ ಕಿಂಡರ್‌ಗಾರ್ಟನ್” ಅಧಿಕೃತವಾಗಿ ಉದ್ಘಾಟನೆಗೊಂಡಿತು.ಶ್ರೀ ಸೈಫುಲ್ಲಾ ತಂಘಲ್ ಶಾಲೆಯ ಲಿಫ್ಲೆಟ್ ಬಿಡುಗಡೆ ಮಾಡಿದರು. ಆಹ್ಮದ್ ಭಾವ ಹಾಜಿ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳ ಪುಸ್ತಕ ಸೆಟ್ ಹಾಗೂ ಸ್ವಾಗತ ಕಿಟ್ ಬಿಡುಗಡೆಗೊಳಿಸಿದರು.
ಅತ್ತಾವುಲ್ಲ ತಂಘಲ್ ಶಾಲಾ ಫರ್ನಿಚರ್ ಅನಾವರಣಗೊಳಿಸುವುದರ ಜೊತೆಗೆ ಶಾಲಾ ಯೂನಿಫಾರ್ಮ್ ಬಿಡುಗಡೆಗೊಳಿಸಿದರು.
ಬಳಿಕ ವೇದಿಕೆಯಲ್ಲಿ ಜಿಲ್ಲಾ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ವಿಜ್ಞಾನ, ಕಲೆ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿ ಶಾಲೆಯಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಕೂಡಾ ವಿಶೇಷ ಗೌರವ ನೀಡಿ ಪ್ರೋತ್ಸಾಹಿಸಲಾಯಿತು.ಅಲ್ ಸಖಾಫ್ ಶಾಲೆ ಒಂದು ಸಂಸ್ಥೆಯಷ್ಟೇ ಅಲ್ಲ, ಕಾಲದಹಾದಿಯಲ್ಲಿ ಪರಸ್ಪರ ಬೆಳೆಸಿಕೊಂಡು ಬಲಗೊಳ್ಳುವ ಒಗ್ಗಟ್ಟಿನ ಕುಟುಂಬವಾಗಿರುವುದನ್ನು ಕಾರ್ಯಕ್ರಮ ಮತ್ತೊಮ್ಮೆ ನೆನಪಿಸಿದೆ.
ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳ ಬಲಿಷ್ಠ ವಿದ್ಯಾರ್ಥಿ ಸಮುದಾಯ ಹೊಂದಿರುವ ಅಲ್ ಸಖಾಫ್ ಶಾಲೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಪೂರಕ ಚಟುವಟಿಕೆಗಳ ಸಮನ್ವಯದೊಂದಿಗೆ ಚೈತನ್ಯಮಯ ಅಧ್ಯಯನ ವಾತಾವರಣವನ್ನು ಒದಗಿಸುತ್ತಾ ಬಂದಿದೆ. ಪೋಷಕ ವಾತಾವರಣ, ಸಮರ್ಪಿತ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳ ಮೂಲಕ ಪ್ರತಿಯೊಬ್ಬ ಮಕ್ಕಳಿಗೂ ವೈಯಕ್ತಿಕ ಗಮನ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ.ಸಂಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ, ಪ್ರಸಿದ್ಧ ಅಲ್ ಬಿರ್ರ್ ಫ್ರಾಂಚೈಸಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಸುವ್ಯವಸ್ಥಿತ ಕಿಂಡರ್‌ಗಾರ್ಟನ್ ವಿಭಾಗ. ಇದು ಮಕ್ಕಳಿಗೆ ಸಂತೋಷಕರ, ವಯಸ್ಸಿಗೆ ತಕ್ಕ ಶಿಕ್ಷಣ ವಿಧಾನಗಳ ಮೂಲಕ ಸೃಜನಶೀಲತೆ, ಮೌಲ್ಯ ಶಿಕ್ಷಣ ಹಾಗೂ ದೃಢ ನೆಲೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದೆ.
ಬಳಿಕ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ನಾಟಕ, ಮಾಪ್ಪಿಳಪಾಟ್, ನಾಡ ಗೀತೆ ದೃಶ್ಯಾವಳಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಅಪಾರ ಪ್ರತಿಭೆಯನ್ನು ಪ್ರದರ್ಶಿಸಿದರು. ಶಿಕ್ಷಕರ ಮಾರ್ಗದರ್ಶನ, ವ್ಯವಸ್ಥಾಪಕರ ಸಹಕಾರ ಮತ್ತು ಪೋಷಕರ ನಿಸ್ವಾರ್ಥ ಬೆಂಬಲದಿಂದ ಈ ಕಾರ್ಯಕ್ರಮವು ಅತ್ಯಂತ ಯಶಸ್ಸನ್ನು ಕಂಡಿತು. ಎಲ್ಲರ ಸಹಕಾರದಿಂದ ವಾರ್ಷಿಕೋತ್ಸವವು ಸಂತೋಷ, ಉತ್ಸಾಹ ಹಾಗೂ ಹೆಮ್ಮೆಯಿಂದ ಕೂಡಿದ ಒಂದು ಅದ್ಬುತ ಆಚರಣೆಯಾಗಿ ಮೂಡಿ ಬಂತು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರು ಸೇರಿ ಹೈಡ್ರೋಜನ್ ಬಲೂನ್‌ಗಳನ್ನು ಹಾರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.ಎಂ ಪಿಟಿಎ ಶಫೀನಾ ಸ್ವಾಗತಿಸಿ ಮುಖ್ಯೋಪಾಧ್ಯಾಯಿನಿ ಮಿಸ್ಬಾ ಎ ವಂದಿಸಿದರು.