ಮಂಜೇಶ್ವರ: ಮಣ್ಣಂಕುಳಿಯ ಅಂಗನವಾಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜೇಶ್ವರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕರ್ನಾಟಕದ ಪುತ್ತೂರು ತಾಲ್ಲೂಕಿನ ನೆಲ್ಯಾಡಿ ಕೊಕ್ಕಡ ನಿವಾಸಿ ಅಶ್ರಫ್ (55) ಎಂದು ಗುರುತಿಸಲಾಗಿದೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಉಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ಈಗಾಗಲೇ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಕಳ್ಳತನ ಮಾಡಿದ ವಸ್ತುಗಳನ್ನು ಉಪ್ಪಳದಲ್ಲಿರುವ ಒಬ್ಬ ಹಿಂದಿ ಭಾಷಿಕ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ, ಕದ್ದ ವಸ್ತುಗಳನ್ನು ಖರೀದಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸಿ, ಕಳ್ಳತನ ನಡೆಸಿದ ಬಳಿಕ ಆ ಸ್ಥಳವನ್ನು ಬಿಟ್ಟು ಪರಾರಿಯಾಗುವುದು ಈತನ ರೂಢಿಯಾಗಿದ್ದು, ನಂತರ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡು ಅಲ್ಲಿಯೂ ಕಳ್ಳತನ ನಡೆಸುತ್ತಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಎಸ್‌ಐ ವೈಷ್ಣವ್ ರಾಮಚಂದ್ರನ್, ಶಬರಿಕೃಷ್ಣ, ಉಮೇಶ್ ಹಾಗೂ ಸೋನಿಯಾ ಅವರುಗಳು ಭಾಗವಹಿಸಿದ್ದರು.