ಮಂಜೇಶ್ವರ ∙ ಕಳೆದ ಕೆಲವು ದಿವಸಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಪ್ರದೇಶದಲ್ಲಿ ವ್ಯಾಪಕವಾದ ನೀರು ನಿಂತು ಪ್ರದೇಶದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರವಾಹದ ಪರಿಣಾಮವಾಗಿ ಅಲ್ಲಿನ 12 ಮನೆಗಳಿಗೆ ಮಳೆನೀರು ನುಗ್ಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಮಳೆನೀರು ಹರಿದು ಹೋಗಬೇಕಾದ ಚರಂಡಿಗಳನ್ನು ಮುಚ್ಚಿರುವುದು ಹಾಗೂ ಸಮೀಪದ ತೋಡಿನ ಕಟ್ಟ ಒಡೆದಿರುವುದು ಈ ರೀತಿಯಾಗಿ ನೀರು ಶೇಖರಣೆಯಾಗಿ ಪ್ರವಾಹದ ಭೀತಿಗೆ ಕಾರಣವಾಗಿರುವುದಾಗಿ ತಿಳಿದು ಬಂದಿದೆ.
ಸೂಕ್ತವಾದ ನಿಕಾಶಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ನೇರವಾಗಿ ಮನೆಗಳಿಗೆ ನೀರು ನುಗ್ಗಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.
ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ.
ಇಷ್ಟರ ತನಕ ಸ್ಥಳೀಯ ಆಡಳಿತ ಘಟಕದ ಅಧಿಕಾರಿಗಳು ಯಾರೂ ಸ್ಥಳಕ್ಕೆ ಭೇಟಿ ನೀಡಿಲ್ಲವೆಂಬ ಆರೋಪ ಕೂಡಾ ಕೇಳಿ ಬಂದಿದೆ.