ಮಂಜೇಶ್ವರ: ತೂಮಿನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಪಂಚಾಯತ್‌ನಿಂದ ತುರ್ತು ನೀರು ಸರಬರಾಜು : ಗ್ರಾಮಸ್ಥರಿಂದ ಮೆಚ್ಚುಗೆ : ನಿದ್ರೆಗೆ ಜಾರಿದ ಕೇರಳ ನೀರು ಸರಬರಾಜು ವ್ಯವಸ್ಥೆ
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ತೂಮಿನಾಡು ಪ್ರದೇಶದಲ್ಲಿ ಬೇಸಿಗೆಯ ತಾಪದೊಂದಿಗೆ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಕಠಿಣ ಪರಿಸ್ಥಿತಿಯನ್ನು ಮನಗಂಡು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡು ಅವರ ವಿಶೇಷ ಮುತುವರ್ಜಿಯಿಂದಾಗಿ ಇದೀಗ ಗ್ರಾಮದ ಮನೆ ಮನೆಗಳಿಗೆ ನೀರಿನ ಸರಬರಾಜು ಆರಂಭಗೊಂಡಿದೆ.
ಪಂಚಾಯತ್‌ನಿಂದ ಆಸರೆಯಾದ ಜಲಧಾರೆ
ಪ್ರಸ್ತುತ ಪಂಚಾಯತ್ ವತಿಯಿಂದ ಎರಡು ದಿನಕ್ಕೊಮ್ಮೆ ಸುಮಾರು 24,000 ಲೀಟರ್ ನೀರನ್ನು ಟ್ಯಾಂಕರ್ ಮೂಲಕ ಮನೆ ಮನೆಗಳಿಗೆ ವಿತರಿಸಲಾಗುತ್ತಿದೆ. ಕೇರಳ ಜಲ ಪ್ರಾಧಿಕಾರದಿಂದ ಸಮರ್ಪಕವಾಗಿ ನೀರು ಸರಬರಾಜು ಆಗದ ಈ ಸಮಯದಲ್ಲಿ, ಪಂಚಾಯತ್ ಕೈಗೊಂಡ ಈ ಕ್ರಮವು ಸ್ಥಳೀಯ ನಿವಾಸಿಗಳಿಗೆ ವರದಾನವಾಗಿ ಪರಿಣಮಿಸಿದೆ.
ತೂಮಿನಾಡು ವಾರ್ಡ್‌ನಲ್ಲಿ ಸುಮಾರು 600ಕ್ಕೂ ಅಧಿಕ ಮನೆಗಳಿದ್ದು, ಅನ್ಯ ರಾಜ್ಯದ ನಿವಾಸಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆ ಅಧಿಕವಾಗಿರುವ ಕಾರಣ ಪ್ರಸ್ತುತ ನೀಡಲಾಗುತ್ತಿರುವ ನೀರು ಸಾಕಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿನ ಜೊತೆಯಾಗಿ ಜಿಲ್ಲಾ ಪಂಚಾಯತು ಅದೇ ರೀತಿ ಬ್ಲಾಕ್ ಪಂಚಾಯತು ವತಿಯಿಂದ ವಿಶೇಷ ಅನುದಾನದೊಂದಿಗೆ ಒಂದು ಕೊಳವೆ ಬಾವಿ ವ್ಯವಸ್ಥೆ ಮಾಡಿಸಿದರೆ ಉತ್ತಮವಿತ್ತೆಂದು ಜನರು ಆಡಿ ಕೊಳ್ಳುತಿದ್ದಾರೆ.
ಅದೇ ರೀತಿ ಈಗ ಕೊಡಿಸುವ ಎರಡು ದಿನಕ್ಕೊಮ್ಮೆ ನೀರು ನೀಡುವ ಬದಲಾಗಿ ಪ್ರತಿದಿನವೂ ನೀರು ಸರಬರಾಜು ಮಾಡಿದರೆ ನಮಗೆ ಹೆಚ್ಚಿನ ಅನುಕೂಲವಾಗುತ್ತದೆ” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆಂದೂ ಕಾಣದ ರೀತಿಯಲ್ಲಿ ವಾರ್ಡ್ ಸದಸ್ಯರು ಕುಡಿಯುವ ನೀರಿಗಾಗಿ ಹಗಲಿರುಳು ಶ್ರಮಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೇರಳ ನೀರು ಸರಬರಾಜು ಇಲಾಖೆ ಕೂಡಾ ತಕ್ಷಣ ಎಚ್ಚೆತ್ತುಕೊಂಡು ತೂಮಿನಾಡು ಭಾಗಕ್ಕೆಂದೇ ಪ್ರತ್ಯೇಕವಾಗಿ ಮತ್ತೊಂದು ಕೊಳವೆ ಬಾವಿಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂಬುದು ಅನಿವಾರ್ಯವಾಗಿದೆ.
“ಪಂಚಾಯತ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೆ ಶಾಶ್ವತ ಪರಿಹಾರಕ್ಕಾಗಿ ಜಲ ಪ್ರಾಧಿಕಾರವು ಹೊಸ ಮೂಲಗಳನ್ನು ಹುಡುಕಬೇಕಿದೆ. ಅಲ್ಲಿಯವರೆಗೆ ಪಂಚಾಯತ್ ಪ್ರತಿದಿನ ನೀರು ಒದಗಿಸುವತ್ತ ಗಮನಹರಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.