ಮಂಜೇಶ್ವರ : ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕೀರ್ತಿ ಮತ್ತು ಗೌರವವನ್ನು ಹೊಂದಿದ್ದ ಗಡಿನಾಡಿನ ಪ್ರತಿಷ್ಠಿತ ಸರಕಾರಿ ಶಾಲೆಯೊಂದು, ಇದೀಗ ಮುಖ್ಯೋಪಾಧ್ಯಾಯಿನಿಂಯ ಏಕಾಧಿಪತ್ಯದ ಕಾರ್ಯವೈಖರಿಯಿಂದಾಗಿ ತೀವ್ರ ವಿವಾದದ ಸುಳಿಗೆ ಸಿಲುಕಿರುವುದಾಗಿ ಹಾಗೂ ಶಾಲೆಯ ಘನತೆ ಕುಸಿಯುತ್ತಿರುವುದಾಗಿ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ರಾಗಿಂಗ್, ಶಿಕ್ಷಕರು ತಡವಾಗಿ ತಲುಪುತ್ತಿರುವುದು, ಆಂತರಿಕ ಕಚ್ಚಾಟ, ಕೆಲವೊಂದು ಸಿಬ್ಬಂದಿಗಳು ಮಧ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುವುದು, ಶಿಕ್ಷಕರ ಅಶಿಸ್ತಿನಂತಹ ಪ್ರಕರಣಗಳು ಹೆಚ್ಚುತ್ತಿವೆ. ಶಾಲೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಯಾರಾದರೂ ದನಿ ಎತ್ತಿದರೆ, ಅಂತಹ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿಂದೆ ಸುದ್ದಿಗಳ ಮೂಲಕ ಸದಾ ಮುಂಚೂಣಿಯಲ್ಲಿದ್ದ ಈ ಶಾಲೆ, ಇದೀಗ ತನ್ನ ಚಟುವಟಿಕೆಗಳನ್ನು ಗೌಪ್ಯವಾಗಿಟ್ಟುಕೊಂಡು ಸುದ್ದಿಗಾರರನ್ನು ಕೂಡಾ ದೂರವಿಡುತ್ತಿರುವ ಬಗ್ಗೆ ಕೂಡಾ ಆರೋಪಿಸಲಾಗಿದೆ. ಅದೇ ರೀತಿ ಶಾಲಾ ಪೂರ್ವ ವಿದ್ಯಾರ್ಥಿ ಸಂಘಟನೆಗೂ ಈಗ ಕಿಂಚಿತ್ತೂ ಬೆಲೆ ಇಲ್ಲವೆನ್ನಲಾಗಿದೆ.
ಗಡಿನಾಡಿನ ಶಾಲೆಯೊಂದನ್ನು ಟಾರ್ಗೆಟ್ ಮಾಡಿ ಗೋಡೆಗೆ ಬಡಿದ ರೀತಿಯ ಬರವಣಿಗೆಯಲ್ಲಿ ಎಲ್ಲೂ ಶಾಲೆಯ ನಿರ್ಧಿಷ್ಟ ಗುರುತು ವ್ಯಕ್ತವಾಗಿಲ್ಲ.
ಶಾಲೆಯ ಈ ದುಸ್ಥಿತಿಯಿಂದ ಕಂಗೆಟ್ಟಿರುವ ಪೋಷಕರು ಮತ್ತು ಸ್ಥಳೀಯರು, ಶಾಲೆಯ ಭವಿಷ್ಯದ ದೃಷ್ಟಿಯಿಂದ ಇದೀಗ “ಶಾಲೆ ಬಚಾವೋ, ಹೆಚ್.ಎಂ. ಹಟಾವೋ” ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಚುರುಕುಗೊಳಿಸಿದ್ದಾರೆಂದು ಸೂಚಿಸಲಾಗಿದೆ.