ಮಂಜೇಶ್ವರ: ಕೇರಳದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಬಹುನಿರೀಕ್ಷಿತ ‘ಪ್ರಿಯದರ್ಶಿನಿ’ ಯೋಜನೆಗೆ ಮಂಜೇಶ್ವರ ಕ್ಷೇತ್ರದಲ್ಲಿ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ.
ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಬಸ್ಸಿನ ಧ್ವಜ ಹಾರಿಸಿ, ಡಬಲ್ ಬೆಲ್ ಬಾರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಮೊದಲ ಟಿಕೆಟ್ ವಿತರಣೆ ಮತ್ತು ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಬಸ್ಸಿನೊಳಗೆ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಅವರಿಗೆ ಶಾಸಕರು ಸಾಂಕೇತಿಕವಾಗಿ ಮೊದಲ ಟಿಕೆಟ್ ನೀಡಿದರು. ಬಳಿಕ ಬಸ್ಸಿನ ಮೊದಲ ಸಂಚಾರಕ್ಕೆ ಶುಭ ಕೋರಿ ತೆಂಗಿನಕಾಯಿ ಒಡೆದು ಸಂಭ್ರಮಿಸಲಾಯಿತು.
ಈ ವೇಳೆ ನೆರೆದಿದ್ದ ಕಾರ್ಯಕರ್ತರು ಯುಡಿಎಫ್ ಸರ್ಕಾರ ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ತೂಮಿನಾಡು, ಕುಂಜತ್ತೂರು ಮತ್ತು ಉದ್ಯಾವರ ಸೇರಿದಂತೆ ಹಲವೆಡೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ಬಸ್ಸುಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ದೈನಂದಿನ ಕೆಲಸ ಕಾರ್ಯಗಳಿಗಾಗಿ ಮಂಗಳೂರು, ಪುತ್ತೂರು, ಸುಳ್ಯಕ್ಕೆ ಸಂಚರಿಸುವ ಸಾವಿರಾರು ಗಡಿನಾಡ ಮಹಿಳೆಯರಿಗೆ ಈ ಯೋಜನೆ ದೊಡ್ಡ ಮಟ್ಟದ ನೆರವಾಗಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಕಾರ್ಯದರ್ಶಿಗಳಾದ ಸೋಮಶೇಖರ್ ಶೇಣಿ, ಲಕ್ಷ್ಮಣ ಪ್ರಭು ಕುಂಬಳೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೃಫುಲ್ಲಾ ತಂಜಳ್ ಸೇರಿದಂತೆ ಪ್ರಮುಖ ಮುಖಂಡರು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು