ದೇವಸ್ಥಾನದ ಭೂಮಿಯ ತೆರಿಗೆ ಪಾವತಿಗೆ ಲಂಚ ಪಡೆಯುತ್ತಿದ್ದ ಗ್ರಾಮ ಕಚೇರಿ ಸಿಬ್ಬಂದಿ ವಿಜಿಲೆನ್ಸ್ ಬಲೆಗೆ

​ ಮಂಜೇಶ್ವರ :: ದೇವಸ್ಥಾನಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ ಭೂಮಿಯನ್ನು ಸಮಿತಿಯ ಹೆಸರಿಗೆ ವರ್ಗಾಯಿಸಿ, ತೆರಿಗೆ ಪಾವತಿಸಲು ಸಹಾಯ ಮಾಡುವುದಾಗಿ ನಂಬಿಸಿ ಲಂಚ ಪಡೆಯುತ್ತಿದ್ದ ಉಪ್ಪಳ ಗ್ರೂಪ್ ಗ್ರಾಮ ಕಚೇರಿಯ ಕ್ಯಾಶುಯಲ್ ಸ್ವೀಪರ್ ಓರ್ವನನ್ನು ಕಾಸರಗೋಡು ವಿಜಿಲೆನ್ಸ್ ತಂಡವು ಕೈಯಾರೆ ಬಂಧಿಸಿದೆ. ಕೊಡಿಬೈಲ್ ನಿವಾಸಿ ಶಿವಪ್ರಸಾದ್ ಕೆ. ಬಂಧಿತ ಆರೋಪಿ.

​ಮಂಗಲ್ಪಾಡಿ ಯ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು ಭೂಮಿಯ ವರ್ಗಾವಣೆ ಮತ್ತು ತೆರಿಗೆ ಪಾವತಿಗಾಗಿ ಒಂದು ತಿಂಗಳ ಹಿಂದೆ ಉಪ್ಪಳ ಗ್ರಾಮ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತೆರಿಗೆ ಚೀಟಿ ಹಳೆಯ ಮಾಲೀಕರ ಹೆಸರಿನಲ್ಲಿದ್ದ ಕಾರಣ, ಕೆಲಸ ವಿಳಂಬವಾಗುತ್ತದೆ ಎಂದು ವಿಶೇಷ ಗ್ರಾಮ ಅಧಿಕಾರಿ ತಿಳಿಸಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಸ್ವೀಪರ್ ಆಗಿದ್ದ ಶಿವಪ್ರಸಾದ್, ಅಧಿಕಾರಿಗಳೊಂದಿಗೆ ಮಾತನಾಡಿ ಕೆಲಸವನ್ನು ಬೇಗನೆ ಮಾಡಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.

​ಕೆಲವು ದಿನಗಳ ಹಿಂದೆ ಸ್ಥಳ ಪರಿಶೀಲನೆಗೆ ಬಂದಿದ್ದ ವಿಶೇಷ ಗ್ರಾಮ ಅಧಿಕಾರಿಯೊಂದಿಗೆ ಶಿವಪ್ರಸಾದ್ ಕೂಡ ಇದ್ದನು. ಆ ಸಂದರ್ಭದಲ್ಲಿ ಕೆಲಸ ಮಾಡಿಕೊಡಲು ಆರೋಪಿಯು 1,500 ರೂ. ಲಂಚ ಪಡೆದು, ಬಾಕಿ 5,000 ರೂ.ಗಳನ್ನು ನಂತರ ನೀಡಬೇಕೆಂದು ಪೀಡಿಸಿದ್ದನು. ಲಂಚ ನೀಡಲು ಇಷ್ಟವಿಲ್ಲದ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಕೂಡಲೇ ಈ ಬಗ್ಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿಗೆ ದೂರು ನೀಡಿದ್ದರು.

ದೂರಿನ ಆಧಾರದಂತೆ ಕಾಸರಗೋಡು ವಿಜಿಲೆನ್ಸ್ ತಂಡವು ತಂತ್ರ ರೂಪಿಸಿತ್ತು. ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ಉಪ್ಪಳ ಗ್ರಾಮ ಕಚೇರಿಯ ಮುಂಭಾಗದಲ್ಲಿ ಶಿವಪ್ರಸಾದ್ ದೂರುದಾರರಿಂದ 5,000 ರೂ. ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡವು ದಾಳಿ ನಡೆಸಿ ಆತನನ್ನು ಬಂಧಿಸಿತು.

ಬಂಧಿತ ಶಿವಪ್ರಸಾದನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದಲ್ಲಿ ಗ್ರಾಮ ಕಚೇರಿಯ ಇತರ ಅಧಿಕಾರಿಗಳಿಗೆ ಅಥವಾ ಸಿಬ್ಬಂದಿಗೆ ಸಂಬಂಧವಿದೆಯೇ ಎಂಬ ಬಗ್ಗೆ ಹಾಗೂ ಆರೋಪಿಯು ಈ ಹಿಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ತಲಚೇರಿಯ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!