ಮಂಜೇಶ್ವರ, ಜೂನ್ 20: ಈ ಬಾರಿಯ ಭಾರೀ ಮಳೆಯಿಂದ ಮಂಜೇಶ್ವರ ಸಮೀಪದ ಮಜಿಬೈಲ್ ಪ್ರದೇಶದಲ್ಲಿ ಮನೆಯೊಂದು ಹಾನಿಗೊಳಗಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ನೆರವಿಗೆ ಸ್ಥಳೀಯ ಕಲ್ಕಿ ಯುವಕ ತಂಡ ಧಾವಿಸಿ ಮಾನವೀಯತೆ ಮೆರೆದಿದೆ.
ಕೇಶವ ಮತ್ತು ಲಲಿತ ದಂಪತಿಗಳ ಮನೆ ಮಳೆಯಿಂದ ಹಾನಿಗೊಳಗಾಗಿದ್ದು, ಕುಟುಂಬದ ಸದಸ್ಯರು, ಸೊಸೆಯಂದಿರು ಹಾಗೂ ಪುಟ್ಟ ಮಕ್ಕಳು ಇದೇ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವನೋಪಾಯಕ್ಕಾಗಿ ಮನೆಯ ಒಬ್ಬ ಸದಸ್ಯ ಲಾಟರಿ ವ್ಯವಹಾರ ನಡೆಸುತ್ತಿದ್ದು, ಮನೆ ಹಾನಿಗೊಳಗಾದ ಕಾರಣ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಈ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರದ ಕಲ್ಕಿ ತಂಡದ ಯುವಕರು ಒಂದು ವಾರದ ಹಿಂದೆಯೇ ಮನೆ ದುರಸ್ತಿ ಕಾರ್ಯ ಕೈಗೊಳ್ಳಲು ನಿರ್ಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮನೆಯ ಮಾಡನ್ನು ದುರಸ್ತಿ ಗೊಳಿಸುವ ಸಂಧರ್ಭದಲ್ಲಿ ಮಳೆಯಿಂದ ನೆನೆದಿದ್ದ ಗೋಡೆಯ ಭಾಗ ಕುಸಿದಿದೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಆದರೆ ಇದರಿಂದ ಹಿಂದೆ ಸರಿಯದೆ ಯುವಕರು ಕುಟುಂಬಕ್ಕೆ ಶಾಶ್ವತ ನೆರವು ನೀಡುವ ಸಂಕಲ್ಪದೊಂದಿಗೆ ದುರಸ್ತಿ ಕಾರ್ಯವನ್ನು ಮುಂದುವರಿಸಿದರು. ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ಅರ್ಧ ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿ ಮನೆ ದುರಸ್ತಿ ಕಾರ್ಯಕ್ಕೆ ಮುಂದಾದರು.
ಈ ಕಾರ್ಯದಲ್ಲಿ ಚಕ್ರವರ್ತಿ ಹೊಸಂಗಡಿ ತಂಡವು ಸಹ ಕೈಜೋಡಿಸಿದ್ದು, ಅವರ ಸಹಭಾಗಿತ್ವದಲ್ಲಿ ಮನೆಯ ದುರಸ್ತಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಮನೆ ಅಚ್ಚುಕಟ್ಟಾಗಿ ನಿರ್ಮಿಸಿ ಕುಟುಂಬಕ್ಕೆ ಇಂದು ಮನೆಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟೀಮ್ ಕಲ್ಕಿ ಮುಖ್ಯಸ್ಥರಾದ ಅಖಿಲ್ ಶೆಟ್ಟಿ ,
ಟೀಮ್ ಕಲ್ಕಿ ಮಂಜೇಶ್ವರ ಸಂಸ್ಥಾಪಕರಾದ ಅರುಣ್ ಕುಮಾರ್ ದುರ್ಗಿಪಳ್ಳ ,ಟೀಮ್ ಕಲ್ಕಿ ಅಧ್ಯಕ್ಷ ರಂಜಿತ್ ಕುಮಾರ್ , ಬಿಜೆಪಿ ಕೌನ್ಸಿಲರ್ಹ ಹರೀಶ್ಚಂದ್ರ ಮಂಜೇಶ್ವರ ,ಸುರೇಶ್ ಗಾಣಿಂಜಾಲ್ – ಚಕ್ರವರ್ತಿ ಕ್ಲಬ್ ಹೊಸಂಗಡಿ ಪ್ರಧಾನ ಕಾರ್ಯದರ್ಶಿ, ಅಕ್ಷಯ್ ಕುಮಾರ್ – ಟೀಮ್ ಕಲ್ಕಿ ಸದಸ್ಯರು ಹಾಗು ಹಲವು ಪ್ರಮುಖರು ಉಪಸ್ಥಿತರಿದ್ದರು.
ಸಮಾಜ ಸೇವೆಯ ಮೂಲಕ ಬದಲಾವಣೆಯತ್ತ ಒಂದು ಹೆಜ್ಜೆ ಎಂಬ ದ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಲ್ಕಿ ಯುವಕ ತಂಡದ ಈ ಸೇವಾ ಮನೋಭಾವ ಹಾಗೂ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಕಷ್ಟದ ಸಂದರ್ಭದಲ್ಲಿ ಕುಟುಂಬದ ಬೆನ್ನಿಗೆ ನಿಂತ ಯುವಕರ ಕಾರ್ಯ ಇತರರಿಗೆ ಮಾದರಿಯಾಗಿದೆ.