ಕಾಸರಗೋಡು : ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಜನರು ಅಕ್ಷರಶಹ ತತ್ತರಿಸಿ ಹೋಗಿದ್ದಾರೆ . ಗಡಿನಾಡು ಕಾಸರಗೋಡಿನಲ್ಲಿ ನಡೆದ ಘಟನೆ ನಿದ್ರೆಯಲ್ಲಿದ್ದವರಿಗೆ ಒಂದು ಕ್ಷಣ ಯವಲೋಕದ ದರ್ಶನವನ್ನೇ ಮಾಡಿಸಿದೆ .ಹಂಚು ಹಾಕಿದ ಮನೆಯ ಮೇಲೆಯೇ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಚಂದ್ರಗಿರಿಯ ನಡಕ್ಕಾಲ್ ಎಂಬಲ್ಲಿ ನಡೆದಿದೆ .
ಚಂದ್ರಗಿರಿ ನಡಕ್ಕಾಲ್ ಗ್ರಾಮದಲ್ಲಿ ವಾಸಿಸುವ ಮಿತೇಶ್ ಎಂಬವರ ಮನೆಗೆ ಸಮೀಪದ ಗುಡ್ಡ ನಿನ್ನೆ ರಾತ್ರಿ ಸುರಿದ ಭೀಕರ ಮಳೆಗೆ ಕುಸಿದಿದೆ . ಈ ಘಟನೆಯಿಂದ ಬೃಹತ್ ಕಲ್ಲು ಸಹಿತ ಮಣ್ಣು ಮನೆಯ ಒಂದು ಪಾರ್ಶ್ವದ ಮೇಲೆ ಬಿದ್ದು ದೊಡ್ಡ ಅಪಾಯಕ್ಕೆ ಕಾರಣವಾಗಿದೆ . ಅವಘಡದಿಂದ ಮನೆಯ ಒಂದು ಕೊಠಡಿ ಸಂಪೂರ್ಣವಾಗಿ ಕುಸಿದಿದ್ದು ಮನೆ ಭಾಗಶಃ ಹಾನಿಗೆ ಒಳಗಾಗಿದೆ . ಅದೃಷ್ಟವಶಾತ್ ಜೀವ ಹಾನಿ ಉಂಟಾಗಿಲ್ಲ .
ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಕುಸಿತದ ಸದ್ದು ಕೇಳಿ ಮನೆಯಲ್ಲಿದ್ದವರು ಹೊರಗೆ ಓಡಿ ಹಾನಿಯಿಂದ ಬಚಾವಾಗಿದ್ದಾರೆ .ಮನೆಯ ಸಮೀಪದ ಗುಡ್ಡ ಕುಸಿಯುವ ಬಗ್ಗೆ ಈ ಹಿಂದೆಯೇ ಸಂಶಯಗಳಿದ್ದು, ಎರಡು ವರ್ಷಗಳ ಹಿಂದೆಯೇ ಕಂದಾಯ ಇಲಾಖೆಯ ಅಧಿಕೃತರಿಗೆ ಮನವಿ ನೀಡಿ ವಿಷಯದ ಗಂಭೀರತೆಯನ್ನು ತಿಳಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲನ್ನು ವ್ಯಕ್ತ ಪಡಿಸಿದ್ದಾರೆ.