ಕಾಸರಗೋಡು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಶೈಕ್ಷಣಿಕ ಹಿತಾಸಕ್ತಿಯನ್ನು ರಕ್ಷಿಸುವಂತೆ ಆಗ್ರಹಿಸಿ ರಾಜ್ಯ ಶಿಕ್ಷಣ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯವರನ್ನು ಭೇಟಿ ಮಾಡಿತು.
ನಿಯೋಗವು ‘ಮಲಯಾಳಂ ಭಾಷಾ ಅಧಿನಿಯಮ 2025’ರ ಕಲಂ 6(1)ಕ್ಕೆ ತಿದ್ದುಪಡಿ ತರುವಂತೆ ಬಲವಾಗಿ ಪ್ರತಿಪಾದಿಸಿತು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿದ್ದರೂ, ಭಾಷಾ ಅಲ್ಪಸಂಖ್ಯಾತರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡುವ ಸ್ಪಷ್ಟ ತಿದ್ದುಪಡಿಯ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿತು.

ಜೊತೆಗೆ, ಕನ್ನಡ ಮಾಧ್ಯಮ ಶಿಕ್ಷಕರಿಗೆ ಅಧಿಕೃತ ಕೈಪಿಡಿ ಒದಗಿಸುವುದು, ಶಾಲಾ ಕಲೋತ್ಸವದಲ್ಲಿ ಕನ್ನಡ ಸ್ಪರ್ಧೆಗಳನ್ನು ಆಯೋಜಿಸುವುದು, ಎಲ್‌ಪಿಎಸ್‌ಟಿ/ಯುಪಿಎಸ್‌ಟಿ ಹಾಗೂ ಪ್ರೀ-ಪ್ರೈಮರಿ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು ಮತ್ತು ಅನುದಾನಿತ ಶಾಲೆಗಳ ದಿನವೇತನ ನೌಕರರನ್ನು ಖಾಯಂಗೊಳಿಸುವಂತಹ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತು.
ಅಹವಾಲುಗಳನ್ನು ಆಲಿಸಿದ ಸಚಿವರು, ಅಲ್ಪಸಂಖ್ಯಾತ ಕನ್ನಡಿಗರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಿಯೋಗದಲ್ಲಿ ಸಂಘದ ಅಧ್ಯಕ್ಷ ಸುಕೇಶ ಎ. ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.


