ಕಾಸರಗೋಡು : ಅಂಗಡಿಯಿಂದ ರೂ.15,000 ನಗದು ಕಳವು ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಪಳಯಂಗಾಡಿ ವೆಂಜರ ನಿವಾಸಿ ಪುನ್ನಕ್ಕನ್ ಮುಸಮ್ಮಿಲ್ (35) ಬಂಧಿತ ಆರೋಪಿ.

ಕಳೆದ ಭಾನುವಾರ ಸಂಜೆ ಪಿ.ಎಂ.ಕೆ. ಅಪ್ಪಲ್ ಎಂಬವರ ಅಂಗಡಿಯ ಮಾಲೀಕ ಹೊರಹೋದ ತಕ್ಷಣ ಒಳನುಗ್ಗಿದ ಆರೋಪಿ ಹಣ ದೋಚಿ ಪರಾರಿಯಾಗಿದ್ದನು.
ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳನ ಸುಳಿವು ಪತ್ತೆಹಚ್ಚಿದ ಪಳಯಂಗಾಡಿ ಪೊಲೀಸರು, ಚಾಣಾಕ್ಷತನದ ತಂತ್ರ ಹೆಣೆದರು. ಸ್ನೇಹಿತನ ಮೂಲಕ ಮುಸಮ್ಮಿಲ್ನಿಗೆ ಫೋನ್ ಮಾಡಿಸಿ, ಚೆರ್ವತ್ತೂರಿನಲ್ಲಿ ಕಾಯುವಂತೆ ತಿಳಿಸಿ ಬೈಕ್ನಲ್ಲಿ ವಾಪಸ್ ಕರೆತರಿಸಿದರು.

ಈ ವೇಳೆ ಹೆದ್ದಾರಿಯಲ್ಲಿ ಹೊಂಚುಹಾಕಿದ್ದ ಪೊಲೀಸರು ಆತನನ್ನು ಸೆರೆಹಿಡಿದು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

