​ವಾಹನ ತಪಾಸಣೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಪೊಲೀಸ್ ಎಸ್‌ಐ ವಿರುದ್ಧ ವಿಜಿಲೆನ್ಸ್ ಕೇಸು

​ಕಾಸರಗೋಡು: ವಾಹನ ತಪಾಸಣೆಯ ಮರೆಯಲ್ಲಿ ಇ-ಚಲನ್ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ದಂಡದ ಹಣವನ್ನು ವಂಚಿಸಿದ ಆರೋಪದ ಮೇಲೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ವಿಜಿಲೆನ್ಸ್ ಪ್ರಕರಣ ದಾಖಲಾಗಿದೆ.

​ಪ್ರಸ್ತುತ ಕಾಸರಗೋಡು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅರುಣ್ ಮೋಹನ್ ವಿರುದ್ಧವೇ ಈ ಕಾನೂನು ಕ್ರಮ ಜರುಗಿಸಲಾಗಿದೆ.

ಇವರು ಮೂಲತಃ ಕೊಲ್ಲಂ ಕಿಳಿಕೊಳೂರು ನೇತಾಜಿ ನಗರದ ನಿವಾಸಿಯಾಗಿದ್ದಾರೆ.
​
​ಆರೋಪಿ ಎಸ್‌ಐ ಅರುಣ್ ಮೋಹನ್ ಅವರು ಹಿಂದೆ ಮೇಲ್ಪರಂಬ್, ಬೇಕಲ್ ಹಾಗೂ ವೆಳ್ಳರಿಕುಂಡು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದಾಗ ಈ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ.

ವಾಹನ ಸವಾರರಿಂದ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ದಂಡ ವಸೂಲಿ ಮಾಡುವಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

​ಇ-ಚಲನ್ ಮೆಷಿನ್‌ನಲ್ಲಿ ವಾಹನಗಳ ನೋಂದಣಿ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಮೂದಿಸುತ್ತಿದ್ದ ಇವರು, ಸಾರ್ವಜನಿಕರಿಂದ ದಂಡದ ಹಣವನ್ನು ಪೂರ್ತಿಯಾಗಿ ಪಡೆದುಕೊಂಡು ಅವರಿಗೆ ರಶೀದಿ ನೀಡುತ್ತಿದ್ದರು.

ಆದರೆ, ಸರ್ಕಾರದ ಇ-ಚಲನ್ ವ್ಯವಸ್ಥೆಯಲ್ಲಿ ಆ ದಂಡದ ಮೊತ್ತವನ್ನು “ಬಾಕಿ” ಎಂದು ತೋರಿಸಿ, ಒಟ್ಟು 2,96,750 ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದು ವಿಜಿಲೆನ್ಸ್ ತನಿಖೆಯಲ್ಲಿ ತಿಳಿದುಬಂದಿದೆ.

​​ಈ ಅಕ್ರಮ ವಂಚನೆಗೆ ಸಂಬಂಧಿಸಿದಂತೆ ವಿಜಿಲೆನ್ಸ್ ಹಿಂದೆ ಸಲ್ಲಿಸಿದ್ದ ಪ್ರಾಥಮಿಕ ವರದಿಯ ಆಧಾರದ ಮೇಲೆ ಅರುಣ್ ಮೋಹನ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಅಮಾನತು ತೆರವುಗೊಂಡು ಮತ್ತೆ ಸೇವೆಗೆ ಮರಳಿದ ಇವರನ್ನು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಸ್‌ಐ ಆಗಿ ನೇಮಿಸಲಾಗಿತ್ತು.

ಇದೀಗ ವಿಜಿಲೆನ್ಸ್ ಇಲಾಖೆಯು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!