ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ‘ಹಸಿರು ಕರ್ಮ ಸೇನೆ’ಯ ಕಾರ್ಯಕರ್ತರ ಬೇಜವಾಬ್ದಾರಿ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯದ ಮೂಟೆಗಳನ್ನು ಸಾರ್ವಜನಿಕ ಸ್ಥಳಗಳಲ್ಲೇ ಬಿಟ್ಟು ಹೋಗುತ್ತಿರುವ ಪ್ರವೃತ್ತಿ ಮತ್ತೆ ಮರುಕಳಿಸಿದೆ.

ಕೆಲವು ತಿಂಗಳ ಮುಂಚೆಯಷ್ಟೇ ಹಸಿರು ಕರ್ಮ ಸೇನೆಯ ಈ ಅಸಡ್ಡೆಯ ವಿರುದ್ಧ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಪಂಚಾಯತ್ ಆಡಳಿತಕ್ಕೆ ಬಿಸಿ ತಟ್ಟಿದಾಗ, ಅಲ್ಪಸಮಯದ ಮಟ್ಟಿಗೆ ಈ ಸಮಸ್ಯೆಗೆ ಕಡಿವಾಣ ಬಿದ್ದಿತ್ತು. ಆದರೆ, ಇದೀಗ ಮತ್ತೆ ಹಸಿರು ಕರ್ಮ ಸೇನೆಯ ಕಾರ್ಯಕರ್ತರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ.

ಶಾಲಾ ಪರಿಸರ, ಬಸ್ ತಂಗುದಾಣಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲೇ ಸಂಗ್ರಹಿಸಿದ ತ್ಯಾಜ್ಯದ ಮೂಟೆಗಳನ್ನು ಇಟ್ಟು ಹೋಗಲಾಗುತ್ತಿದೆ. ಈ ಬಗ್ಗೆ ನಾಗರಿಕರು ಪ್ರಶ್ನಿಸಿದರೆ “ತ್ಯಾಜ್ಯ ಸಾಗಾಟದ ವಾಹನ ಬರಲಿಲ್ಲ” ಎಂಬ ಬೇಜವಾಬ್ದಾರಿಯ ಉತ್ತರ ಹಸಿರು ಕರ್ಮ ಸೇನೆಯಿಂದ ವ್ಯಕ್ತವಾಗುತ್ತಿದೆ.
ಇನ್ನು, ಈ ತ್ಯಾಜ್ಯದ ಮೂಟೆಗಳು ಒಂದೆರಡು ದಿನವಲ್ಲ, ಬರೋಬ್ಬರಿ 15 ರಿಂದ 20 ದಿನಗಳ ಕಾಲ ಅದೇ ಜಾಗದಲ್ಲಿ ಕೊಳೆಯುತ್ತಿರುತ್ತವೆ. ಇವುಗಳನ್ನು ಬೀದಿ ನಾಯಿಗಳು ಎಳೆದಾಡಿ ಚೆಲ್ಲಾಪಿಲ್ಲಿ ಮಾಡುತ್ತಿದ್ದು, ಸಾರ್ವಜನಿಕ ಸ್ಥಳಗಳು ದುರ್ನಾತ ಬೀರುತ್ತಿವೆ. ಕಳೆದ ದಿನವಷ್ಟೇ ಉದ್ಯಾವರ ಗುಡ್ಡೆ ಶಾಲೆಯ ಮುಂಭಾಗದಲ್ಲಿ ಇಂತಹದ್ದೇ ಅಸಹ್ಯಕರ ದೃಶ್ಯ ಕಂಡುಬಂದಿದ್ದು, ಶಾಲಾ ಮಕ್ಕಳು ಹಾಗೂ ಹಾದಿಹೋಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮನೆಗಳಿಂದ ಹಣ ಪಡೆದು ಸಂಗ್ರಹಿಸುವ ತ್ಯಾಜ್ಯವನ್ನು, ನಿಯಮಾನುಸಾರ ವಿಲೇವಾರಿ ಘಟಕಕ್ಕೆ ಸಾಗಿಸದೆ ಸಾರ್ವಜನಿಕ ಸ್ಥಳಗಳಲ್ಲೇ ಬಿಟ್ಟು ಹೋಗುವುದೇಕೆ? ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ನಿದ್ರಾವಸ್ಥೆಗೆ ಜಾರಿದಂತೆ ವರ್ತಿಸುತ್ತಿರುವ ಪಂಚಾಯತ್ ಅಧಿಕಾರಿಗಳು ಇನ್ನಾದರೂ ಕಣ್ಣು ತೆರೆಯುತ್ತಾರೆಯೇ?”ತಕ್ಷಣದ ಕ್ರಮಕ್ಕೆ ಆಗ್ರಹ

ಸಾರ್ವಜನಿಕ ಆರೋಗ್ಯಕ್ಕೆ ಕಂಠಕವಾಗಿರುವ ಈ ಸಮಸ್ಯೆಗೆ ಪಂಚಾಯತ್ ಆಡಳಿತವು ತಕ್ಷಣವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ನಿಯಮ ಉಲ್ಲಂಘಿಸುವ ಹಸಿರು ಕರ್ಮ ಸೇನೆಯ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಂಗ್ರಹಿಸಿದ ತ್ಯಾಜ್ಯವನ್ನು ಅಂದಂದೇ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

