ಪೈವಳಿಕೆಯಲ್ಲಿ ಆಶಾ ಕಾರ್ಯಕರ್ತೆ ನೇಮಕಾತಿ ಸಂದರ್ಶನಕ್ಕೆ ಜನಪರ ಒಕ್ಕೂಟದ ವಿರೋಧ; ರಾಜಕೀಯ ದ್ವೇಷದ ಪ್ರತೀಕಾರವೆಂಬ ಆರೋಪ

ಪೈವಳಿಕೆ: ಗ್ರಾಮ ಪಂಚಾಯತ್‌ನ 16ನೇ ವಾರ್ಡ್ ಕೊಕ್ಕಚಾಲ್‌ನಲ್ಲಿ ನಡೆದ ಆಶಾ ಕಾರ್ಯಕರ್ತೆ ನೇಮಕಾತಿ ಸಂದರ್ಶನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಪರಂಬಳ ವಾರ್ಡ್ ಜನಪರ ಒಕ್ಕೂಟವು ಅಖಾಡಕ್ಕಿಳಿದಿದೆ. ಈ ಸಂಬಂಧ ಪಂಚಾಯತ್ ಕಾರ್ಯದರ್ಶಿಗೆ ದೂರು ಸಲ್ಲಿಸಿರುವ ಸ್ಥಳೀಯರು, ತಕ್ಷಣ ಸಂದರ್ಶನವನ್ನು ರದ್ದುಗೊಳಿಸಬೇಕು ಹಾಗೂ ನೇಮಕಾತಿಯ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಪರಂಬಳ ವಾರ್ಡ್ ಈಗಿನ ಕೊಕ್ಕಚಾಲ್ (16ನೇ ವಾರ್ಡ್) ಆಗಿದೆ. ಈ ವಾರ್ಡ್‌ನಲ್ಲಿ ಕಳೆದ 20 ವರ್ಷಗಳಿಂದ ವಿಲ್ಮಾ ಶಾಂತಿ ಡಿಸೋಜಾ ಅವರು ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು, ಇದೇ ವಾರ್ಡ್‌ನ ಖಾಯಂ ನಿವಾಸಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆ ಇದ್ದರೂ ಅದೇ ವಾರ್ಡ್‌ಗೆ ಮತ್ತೆ ಸಂದರ್ಶನ ನಡೆಸಿರುವುದು ಕಾನೂನುಬಾಹಿರ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಸ್ತುತ ಆಶಾ ಕಾರ್ಯಕರ್ತೆಯ ಹುದ್ದೆ ಖಾಲಿ ಇರುವುದು ಪರಂಬಳ ವಾರ್ಡ್‌ನಲ್ಲಿ. ಆದರೆ, ಪಂಚಾಯತ್ ಚುನಾವಣೆಯಲ್ಲಿ ಹಾಲಿ ಕೊಕ್ಕಚಾಲ್ ವಾರ್ಡ್ ಸದಸ್ಯೆ ಪ್ರಿನ್ಸಿ ಡಿಸೋಜಾ ಅವರ ವಿರುದ್ಧ ಸ್ಪರ್ಧಿಸಿದ್ದ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ವಿಲ್ಮಾ ಶಾಂತಿ ಅವರನ್ನು ಸೇವೆಯಿಂದ ಹೊರಗಿಡುವ ಉದ್ದೇಶದಿಂದ ಕೊಕ್ಕಚಾಲ್ ವಾರ್ಡ್‌ನಲ್ಲಿ ಹೊಸ ಸಂದರ್ಶನ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಶಾ ಕಾರ್ಯಕರ್ತೆಯರು ವಾಸಿಸುವ ಮನೆ ಯಾವ ವಾರ್ಡ್‌ನ ವ್ಯಾಪ್ತಿಯಲ್ಲಿದೆಯೋ, ಅದೇ ವಾರ್ಡ್‌ಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕೆಂಬ ಸರ್ಕಾರದ ಆದೇಶವನ್ನೂ (ಸರ್ಕ್ಯುಲರ್ ಸಂಖ್ಯೆ: NHM/223/2025/SD-S2) ಈ ಕ್ರಮದ ಮೂಲಕ ಉಲ್ಲಂಘಿಸಲಾಗಿದೆ ಎಂದು ಜನಪರ ಒಕ್ಕೂಟ ಆರೋಪಿಸಿದೆ.

ಇದೇ ವೇಳೆ, ತಮ್ಮ ಉದ್ಯೋಗಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಿದರೆ ಅದಕ್ಕೆ ಪಂಚಾಯತ್ ಉಪಾಧ್ಯಕ್ಷರು ಮತ್ತು ವಾರ್ಡ್ ಸದಸ್ಯರೇ ಹೊಣೆಗಾರರಾಗಿರುತ್ತಾರೆ ಹಾಗೂ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ವಿಲ್ಮಾ ಶಾಂತಿ ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!