ಮಂಜೇಶ್ವರ: ಉದ್ಯಾವರ ಗುಡ್ಡೆ ಸರ್ಕಾರಿ ಶಾಲೆಯ ಆವರಣ ಗೋಡೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

​ಮಂಜೇಶ್ವರ:ಮಂಜೇಶ್ವರದ ಜಿ.ಎಚ್.ಎಸ್. ಉದ್ಯಾವರ ಗುಡ್ಡೆ ಸರಕಾರಿ ಶಾಲೆಯು ಇಂದು ಮೂಲಭೂತ ಸಮಸ್ಯೆಗಳ ಗೂಡಾಗಿದ್ದು, ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದೊಡ್ಡಿದೆ. ಶಾಲೆಯ ಆವರಣ ಗೋಡೆ ಮುರಿದು ಬಿದ್ದು ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಇದರ ದುರಸ್ತಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

​ಶಾಲೆಯ ಪಕ್ಕದಲ್ಲೇ ಎಕರೆಗಳ ಗಟ್ಟಲೆ ಅರಣ್ಯ ಇಲಾಖೆಯ ಪ್ರದೇಶವಿದೆ. ಊರಿನಲ್ಲಿ ಹಿಡಿಯಲಾಗುವ ವಿಷಪೂರಿತ ಹಾವುಗಳನ್ನು ಇದೇ ಕಾಡಿನಲ್ಲಿ ಬಿಡಲಾಗುತ್ತಿದೆ. ಆದರೆ ಶಾಲೆಗೆ ಸೂಕ್ತವಾದ ಆವರಣ ಗೋಡೆ ಇಲ್ಲದಿರುವುದರಿಂದ, ಕಾಡಿಗೆ ಬಿಟ್ಟ ಹಾವುಗಳು ನೇರವಾಗಿ ಶಾಲಾ ಆವರಣ ಹಾಗೂ ಕೊಠಡಿಗಳ ಅಕ್ಕಪಕ್ಕದಲ್ಲೇ ಪ್ರವೇಶಿಸುತ್ತಿವೆ.
​ಈ ಹಿಂದೆ ಹಲವು ಬಾರಿ ಶಾಲಾ ಆವರಣದಲ್ಲಿ ವಿಷಪೂರಿತ ಹಾವುಗಳನ್ನು ಕಂಡಿರುವುದಾಗಿ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಯ ಸುತ್ತ ರಕ್ಷಣಾ ಗೋಡೆಯಿಲ್ಲದ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ದೊಡ್ಡ ದುರಂತ ಸಂಭವಿಸಿ, ಅದು ರಾಷ್ಟ್ರಮಟ್ಟದ ಸುದ್ದಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

​ಕೇವಲ ಹಾವಿನ ಕಾಟ ಮಾತ್ರವಲ್ಲದೆ, ಶಾಲೆಯ ಹಿಂಭಾಗದಲ್ಲಿಯೇ ಅಕ್ರಮವಾಗಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ. ಈ ಕಸದ ರಾಶಿಯಿಂದ ಹೊರಡುವ ತೀವ್ರ ದುರ್ಗಂಧವನ್ನು ಸೇವಿಸುತ್ತಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಠ ಕೇಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಇದರಿಂದಾಗಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಗಂಭೀರ ಭೀತಿಯೂ ಎದುರಾಗಿದೆ.

​ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಶಾಲೆಯ ಆವರಣ ಗೋಡೆಯನ್ನು ನಿರ್ಮಿಸಬೇಕು ಹಾಗೂ ಶಾಲೆಯ ಹಿಂಭಾಗದಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!