ಮಂಜೇಶ್ವರ : ಮಂಜೇಶ್ವರವನ್ನು ಸಂಪೂರ್ಣವಾಗಿ ತ್ಯಾಜ್ಯ ಮುಕ್ತವನ್ನಾಗಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ನಾಗರಿಕರು ಹರ ಸಾಹಸ ಪಡುತ್ತಿರುವ ಮಧ್ಯೆ ಕೆಲವು ವಿಕೃತ ಮನಸ್ಸುಗಳು ಸಾರ್ವಜನಿಕ ವಲಯದಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಿರುವ ಕೃತ್ಯವನ್ನು ಮುಂದುವರಿಸುತ್ತಲೇ ಇದೆ.
ಸಾರ್ವಜನಿಕ ವಲಯಗಳಲ್ಲಿ ನಿಯಮ ವಿರೋಧಿಯಾಗಿ ತ್ಯಾಜ್ಯ ಬಿಸಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅದರಲ್ಲಿ ಹೊಸದಾಗಿ ಉದ್ಯಾವರ-ಮಾಡ ಅಂಗನವಾಡಿ ಪ್ರದೇಶದ ಘಟನೆಯೊಂದು ಖಂಡನಾರ್ಹ ಬೆಳವಣಿಗೆಯಾಗಿದೆ.
ಇದೀಗ ಉದ್ಯಾವರ ಮಾಡ ಅಂಗನವಾಡಿ ಪರಿಸರದಲ್ಲಿ ಅಗೋಸ್ಟ್ 3 ರಂದು ಸಂಜೆ 5 ಗಂಟೆಯ ಸುಮಾರಿಗೆ ಕಾರಿನ ನಂಬ್ರ ಪ್ಲೇಟಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ತುಂಬಿಸಿ ಕೊಂಡು ಬಂದ ತ್ಯಾಜ್ಯಗಳನ್ನು ಬಿಸಾಡುತ್ತಿರುವ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವರದಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುವುದರೊಂದಿಗೆ ತಕ್ಷಣದ ತನಿಖೆ ಆರಂಭಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಅದೇ ರೀತಿ ಬಿಸಾಡಿದ ತ್ಯಾಜ್ಯದಲ್ಲಿ ಉಪ್ಪಳದ ಚಿನ್ನದ ಮಳಿಗೆಯೊಂದರಿಂದ ಖರೀದಿಸಲಾದ ಚಿನ್ನದ ಬಿಲ್ಲೊಂದು ಪತ್ತೆಯಾಗಿದ್ದು ಬಿಲ್ಲಿನಲ್ಲಿ ಉಲ್ಲೇಖಿತ ವಿಳಾಸದ ಜಾಡು ಹಿಡಿದು ತ್ಯಾಜ್ಯ ಬಿಸಾಡಿದವನನ್ನು ಪತ್ತೆ ಹಚ್ಚಿ ತನಿಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಸಿ.ಸಿ ಕ್ಯಾಮರಾ ದೃಶ್ಯಗಳ ಸಹಾಯದಿಂದ ಸೂಕ್ತ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿರುವುದಾಗಿಯೂ ಮಾಹಿತಿ ಇದೆ.